ಕತಾರ್, ಆ.28(Daijiworld News/SS): ಕನ್ನಡಿಗರು ಎಲ್ಲಿಯೇ ನೆಲೆಸಿದ್ದರೂ ಸಹ ಅಲ್ಲಿ ನಮ್ಮ ಕನ್ನಡತನವನ್ನು ಎತ್ತಿ ಹಿಡಿದು, ಅಲ್ಲಿ ನಮ್ಮ ನೆಲದ ಕಂಪನ್ನು ಪಸರಿಸುತ್ತಾರೆ. ಅದಕ್ಕೊಂದು ಒಳ್ಳೆಯ ನಿದರ್ಶನವೆಂದರೆ ಬೈಂದೂರಿನ ಸುಬ್ರಹ್ಮಣ್ಯ ಹೆಬ್ಬಾಗಿಲು.
ಹೌದು, ಸುಬ್ರಹ್ಮಣ್ಯ ಹೆಬ್ಬಾಗಿಲು ನಮ್ಮ ಕನ್ನಡ ನೆಲದವರು. ಕಳೆದ 13 ವರ್ಷಗಳಿಂದ ಕತಾರ್'ನಲ್ಲಿ ನೆಲೆಸಿರುವ ಇವರು ಇಂಡಿಯನ್ ಕಮ್ಯುನಿಟಿ ಬೆನ್ವೆಲೆಂಟ್ (ಐ.ಸಿ.ಬಿ.ಎಫ್) ಫೋರಂ ಜಾಯಿಂಟ್ ಸೆಕ್ರೆಟರಿಯಾಗಿ ಆಯ್ಕೆಯಾಗಿದ್ದಾರೆ. ಅಂದ ಹಾಗೆ ಸುಬ್ರಹ್ಮಣ್ಯ ಹೆಬ್ಬಾಗಿಲು ಬೈಂದೂರು ತಗ್ಗರ್ಸೆಯ ಗುರುದತ್ತ ಶೇರುಗಾರ್ ಹಾಗೂ ಮೂಕಾಂಬು ದಂಪತಿ ಪುತ್ರರಾಗಿದ್ದಾರೆ. ಇವರು ಮಯ್ಯಾಡಿ ಧ.ಮ.ಹಿ.ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ದಾವಣಗೆರೆ ಬಾಪೂಜಿ ಫ್ರೌಢಶಾಲೆಯಲ್ಲಿ ಫ್ರೌಢಶಿಕ್ಷಣ ಪೂರೈಸಿ ಬಳಿಕ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಮೇಲುಸ್ತುವಾರಿ ಅಭಿಯಂತರಾಗಿ ಸೇವೆ ಸಲ್ಲಿಸಿ ಬಳಿಕ ಕತಾರ್'ನ ಗಲ್ಪಾರ್ ಆಲ್ ಮಿಸ್ನಾದ್ ಕಂಪನಿಯಲ್ಲಿ ಅಭಿಯಂತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ಕನ್ನಡದ ಸಿನಿಮಾಗಳಾದ ‘ಒಂದು ಮೊಟ್ಟೆಯ ಕಥೆ’, ‘ಕಾಫಿತೋಟ’, ಕೋಟಿಗೊಬ್ಬ-2, ‘ಹೆಬ್ಬುಲಿ’, ‘ಕಿರಿಕ್ ಪಾರ್ಟಿ’, ‘ದೊಡ್ಮನೆ ಹುಡ್ಗ’, ‘ಚೌಕ’, ‘ರಾಜಕುಮಾರ’, ‘ಮಾಸ್ ಲೀಡರ್’, ‘ರಂಗಿತರಂಗ’, ‘ರುಸ್ತುಂ’, ‘ಒಂದಲ್ಲಾ ಎರಡಲ್ಲಾ’, ‘ಅಂಬಿ ನಿಂಗೆ ವಯಸ್ಸಾಯ್ತೋ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’, ‘ನಟ ಸಾರ್ವಭೌಮ’, ‘ಬೆಲ್ ಬಾಟಮ್’, ಗಿರ್ ಗಿಟ್ (ತುಳು ಸಿನಿಮಾ) ಸೇರಿದಂತೆ ಅನೇಕ ಚಿತ್ರಗಳು ವಿದೇಶದಲ್ಲಿ ತೆರೆ ಕಾಣುವಂತೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಂದ ಹಾಗೆ ಇವರು ಕತಾರ್'ನಲ್ಲಿ ಶಿವರಾಜ್ ಕುಮಾರ್ ಅವರ ‘ಮಾಸ್ ಲೀಡರ್’ ಚಿತ್ರದ ‘ದೀಪವೇ ನಿನ್ನ ಕಣ್ಣು’ ಹಾಡಿನ ಚಿತ್ರೀಕರಣದ ಸಂಪೂರ್ಣ ಜವಾಬ್ದಾರಿ ವಹಿಸಿದರು. ಈ ಹಾಡು ಕತಾರ್'ನ ಪ್ರವಾಸೋದ್ಯಮ ಇಲಾಖೆಯ ಮತ್ತು ಭಾರತೀಯ ದೂತವಾಸ ಕೇಂದ್ರದ ಪ್ರಶಂಸೆಗೆ ಭಾಜನವಾಗಿದೆ. ಇದಷ್ಟೇ ಅಲ್ಲದೇ ಕರ್ನಾಟಕ ಚಲನಚಿತ್ರ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ದಿಗ್ಗಜರನ್ನು ಕತಾರ್'ಗೆ ಕರೆಸುವಲ್ಲಿ ಅಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಹಾಗೂ ಗೌರವಿಸುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇನ್ನು ಈ ವರ್ಷ ಕತಾರ್'ನಲ್ಲಿ ನಡೆದ ಸೈಮಾ ಅವಾರ್ಡ್'ನಲ್ಲಿ ಕನ್ನಡದ ಕಲಾವಿದರು ಮತ್ತು ತಂತ್ರಜ್ಞರೊಂದಿಗೆ ಬೆರೆತು, ಅವರ ಯೋಗಕ್ಷೇಮವನ್ನು ವಿಚಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗೆ ನಾಟಕ, ಸಾಂಸ್ಕ್ರತಿಕ ಕಾರ್ಯಕ್ರಮ, ಶೈಕ್ಷಣಿಕ ಹಾಗೂ ಮನೋರಂಜನಾ ಕಾರ್ಯಕ್ರಮದ ಆಯೋಜನೆ, ವಿವಿಧ ಸಂಘ ಸಂಸ್ಥೆಗಳ ಸಮನ್ವಯತೆಯೊಂದಿಗೆ ಕಾರ್ಯಕ್ರಮ ಪ್ರಸ್ತುತಿ, ಕತಾರ್ ಚಲನಚಿತ್ರ ಬಿಡುಗಡೆ ಸೇರಿದಂತೆ ವಿವಿಧ ಗಣ್ಯರ ಕಾರ್ಯಕ್ರಮದ ಪ್ರಮುಖ ಉಸ್ತುವಾರಿ ವಹಿಸಿದ್ದಾರೆ.
ಬರೀ ಮನರಂಜನೆ ಕ್ಷೇತ್ರ ಮಾತ್ರವಲ್ಲದೇ ಸುಬ್ರಹ್ಮಣ್ಯ ಹೆಬ್ಬಾಗಿಲ, ತಮ್ಮ ಸಂಘಟನೆಗಳ ಮೂಲಕ ಅನಿವಾಸಿ ಭಾರತೀಯರ, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ತೊಂದರೆಯಲ್ಲಿ ಸಿಲುಕಿಕೊಂಡವರಿಗೆ ಆಹಾರ, ವೈದ್ಯಕೀಯ ನೆರವು ಮುಂತಾದ ಸೌಲಭ್ಯವನ್ನು ಕಲ್ಪಿಸುತ್ತಿದ್ದಾರೆ. ಇನ್ನು ಕತಾರ್ ಸೇರಿದಂತೆ ಜಾಗತಿಕ ಮಟ್ಟದ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು ಕರ್ನಾಟಕ ಸಂಘ ಕತಾರ್ ಉಪಾಧ್ಯಕ್ಷರಾಗಿ ಹಾಗೂ ಖಜಾಂಚಿಯಾಗಿ, ತುಳುಕೂಟ, ಭಾರತೀಯ ಸಾಂಸ್ಕ್ರತಿಕ ಕೇಂದ್ರ, ಕತಾರ್ ಕರ್ನಾಟಕ ಪ್ರೆಂಡ್ಸ್'ನ ಸದಸ್ಯರಾಗಿದ್ದಾರೆ.
ವಿಶೇಷವೆಂದರೆ, ಇವರು ಕತಾರ್'ನಲ್ಲಿ ಸುಮಾರು 50 ಜನ ಕನ್ನಡಿಗರಿಗೆ ಕೆಲಸವನ್ನು ದೊರಕಿಸಿಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರದಿಂದ ಗೌರವ ಧನ ಸಿಗುವಲ್ಲಿ ಪ್ರಮಾಣಿಕ ಪ್ರಯತ್ನ ನಡೆಸಿದ್ದಾರೆ. ದೇಶ-ವಿದೇಶಗಳಲ್ಲಿ ಹಲವಾರು ಸಾಧಕರನ್ನು ಇವರು ಭೇಟಿ ಮಾಡಿದ್ದು, ಇವರ ಪ್ರೀತಿಗೆ ಪಾತ್ರರಾಗಿದ್ದಾರೆ. ಜೊತೆಗೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಅವರ ಮೆಚ್ಚುಗೆ ಗಳಿಸಿರುವುದು ವಿಶೇಷ.
ಕೇರಳ ಮತ್ತು ಕೂರ್ಗ್'ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ರೂ 15 ಲಕ್ಷ ಹಣವನ್ನು ಇಂಡಿಯನ್ ಕಮ್ಯೂನಿಟಿ ಬೆನೆವಲೆಂಟ್ ಫೋರಮ್'ನ ವತಿಯಿಂದ ಇವರು ಮತ್ತು ಇವರ ಸದಸ್ಯರು, ಪದಾಧಿಕಾರಿಗಳು ಸೇರಿಕೊಂಡು ಸಿ.ಎಂ ಫಂಡ್'ಗೆ ನೀಡಿದ್ದಾರೆ. ಹೀಗೆ ಗ್ರಾಮೀಣ ಭಾಗದಲ್ಲಿ ಜನಿಸಿ ಕತಾರ್ ದೇಶದಲ್ಲಿ ಮಹತ್ವದ ಹುದ್ದೆ ಅಲಂಕರಿಸಿದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ಕೇವಲ ಹಣ ಸಂಪಾದಿಸುವ ಉದ್ದೇಶದಿಂದಲೇ ವಿದೇಶಕ್ಕೆ ಉದ್ಯೋಗಕ್ಕೆ ಹೋಗುವ ಈ ಕಾಲ ಘಟ್ಟದಲ್ಲಿ ಅದಕ್ಕೆಲ್ಲಾ ಅಪವಾದವೆಂಬಂತೆ ಕಂಡು ಬಂದವರು ಸುಬ್ರಹ್ಮಣ್ಯ ಹೆಬ್ಬಾಗಿಲು. ಇವುಗಳಷ್ಟೇ ಅಲ್ಲದೇ ದಾನ-ದತ್ತಿ ಕಾರ್ಯಕ್ರಮಗಳಲ್ಲಿ, ಉಚಿತ ವೈದ್ಯಕೀಯ ಶಿಬಿರಗಳಲ್ಲಿ ಕಾರ್ಮಿಕರ ಶ್ರೇಯೋಭಿವೃದ್ದಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಹೀಗೆ ತಾನು ಹುಟ್ಟಿದ ನೆಲದ ಭಾಷೆ ಮತ್ತು ಸಂಸ್ಕೃತಿ ಸಂಪ್ರದಾಯಗಳ ಕಂಪನ್ನು ವಿದೇಶದ ನೆಲದಲ್ಲಿ ಮೂಡಿಸಿ, ಸದಾ ಬೆಳಗುವಂತೆ ಮಾಡುತ್ತಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು, ಕನ್ನಡಿಗರ ಮನವನ್ನು ಗೆದ್ದಿದ್ದಾರೆ. ಇವರ ಈ ಸೇವೆ, ನಾಡು ನುಡಿ ಅಭಿಮಾನ ನಿರಂತರವಾಗಿ ಸಾಗಲಿ ಎಂಬುದು ಸಹ ನಮ್ಮ ಆಶಯ.