ಮುಂಬೈ,ಆ 24 (Daijiworld News/RD): ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಿರೂಪಣೆಯ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮ ವಿಶೇಷತೆಗಳಿಗೆ ಸಾಕ್ಷಿಯಾಗುವ ಸಂಚಿಕೆಯಾಗಿದ್ದು, ಈ ಬಾರಿಯೂ ಕೂಡ ಒಂದು ಅಪರೂಪದ ಕ್ಷಣವನ್ನು ಸೃಷ್ಠಿ ಮಾಡಿತ್ತು. ಮಹಾರಾಷ್ಟ್ರದಲ್ಲಿ ‘ಅನಾಥ ಮಕ್ಕಳ ತಾಯಿ’ ಎಂದು ಗುರುತಿಸಿಕೊಳ್ಳುವ ಸಿಂಧು ತಾಯಿ ಸಪ್ಕಾಲ್ ಸ್ಪರ್ಧಿಯಾಗಿ ಸಂಚಿಕೆಯಲ್ಲಿ ಪಾಲ್ಗೊಂಡಿದ್ದು, ಅವರ ಪಾದಕ್ಕೆ ನಮಸ್ಕರಿಸುವ ಮೂಲಕ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು.
ಸಿಂಧುತಾಯಿ 1,200 ಮಕ್ಕಳನ್ನು ದತ್ತು ಪಡೆದುಕೊಂಡಿದ್ದು, ಸದ್ಯ 36 ಸೊಸೆಯಂದಿರು, 272 ಅಳಿಯಂದಿರು ಮತ್ತು 450ಕ್ಕೂ ಹೆಚ್ಚು ಮೊಮ್ಮಕ್ಕಳೊಂದಿಗೆ ವಾಸವಾಗಿದ್ದಾರೆ. ಯಾರಿಗೆ ತಾಯಿ ಇಲ್ಲವೋ ಅವರಿಗೆಲ್ಲ ನಾನು ಅಮ್ಮನಾಗುತ್ತಾನೆ ಎಂದು ಹೇಳುವ ಸಿಂಧುತಾಯಿ ಅಪರೂಪದ ವ್ಯಕ್ತಿತ್ವ. ರೈಲ್ವೇ ಟ್ರ್ಯಾಕ್ ನಲ್ಲಿ ಅನಾಥವಾಗಿ ಬಿದ್ದಿದ್ದ ದೀಪಕ್ ಅವರು ದತ್ತು ಪಡೆದ ಮೊದಲ ಮಗು. ಅವರ ಈ ಸೇವೆಗೆ 750ಕ್ಕೂ ಅಧಿಕ ಪ್ರಶಸ್ತಿಗಳು ಲಭಿಸಿವೆ. 2013ರಲ್ಲಿ ಐಕಾನಿಕ್ ಮದರ್ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಸಿಂಧುತಾಯಿ ಅವರನ್ನು ಗೌರವಿಸಲಾಗಿದೆ. ಜೊತೆಗೆ 2010ರಲ್ಲಿ ಮಹಾರಾಷ್ಟ್ರ ಸರ್ಕಾರದ ಅಹಿಲ್ಯಾಬಾಯಿ ಹೋಲ್ಕರ್, 2012ರಲ್ಲಿ ಸಿಎನ್ಎನ್-ಐಬಿಎನ್ ಮತ್ತು ರಿಲಯನ್ಸ್ ಫೌಂಡೇಶನ್ ವತಿಯಿಂದ ನೀಡಲಾಗುವ ‘ರಿಯಲ್ ಹೀರೋ’ ಪ್ರಶಸ್ತಿ, 2018ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದಂದು ರಾಷ್ಟ್ರಪತಿ ರಾಮನಾಥ್ ಕೋವಿಂ ದ್ ಅವರು ‘ನಾರಿ ಶಕ್ತಿ’ ಅವಾರ್ಡ್ ನೀಡಿ ಗೌರವಿಸಲಾಗಿದೆ.
ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ಸಿಂಧುತಾಯಿ ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡ ಅವರು, ನಾನು 20 ವರ್ಷದವಳಿದ್ದಾಗ ಅತ್ತೆ ನನ್ನನ್ನು ಮನೆಯಿಂದ ಹೊರಹಾಕಿದರು. 10 ದಿನದ ಮಗಳು ಮಮತಾಳೊಂದಿಗೆ ಮನೆಯಿಂದ ಹೊರಬಂದಾಗ ಅಮ್ಮ ಸಹ ನನ್ನನ್ನು ಸೇರಿಸಿಕೊಳ್ಳಲಿಲ್ಲ. ಪುಟ್ಟ ಕಂದನನ್ನು ಕರೆದುಕೊಂಡು ಎಲ್ಲಿಗೆ ಹೋಗೋದು? ಎಲ್ಲಿ ಇರಬೇಕು ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡವು. ಕೊನೆಗೆ ರೈಲಿನಲ್ಲಿ ಹಾಡು ಹಾಡುವ ಮೂಲಕ ತನ್ನ ಜೀವನವನ್ನು ಆರಂಭಿಸಿದೆ. ಹಗಲು ಹೊತ್ತು ರೈಲಿನಲ್ಲಿ ಮಗಳೊಂದಿಗೆ ಹಾಡು ಹೇಳಿಸಿ, ರಾತ್ರಿ ಸ್ಮಶಾನದಲ್ಲಿ ಉಳಿದುಕೊಳ್ಳುತ್ತಿದ್ದೆ. ಒಮ್ಮೆ ದೇಶದಲ್ಲಿ ಎಷ್ಟೋ ಮಕ್ಕಳಿಗೆ ಅಮ್ಮ ಇರಲ್ಲ. ಅಂತಹ ಅನಾಥ ಮಕ್ಕಳಿಗೆ ಅಮ್ಮನ ಅವಶ್ಯಕತೆ ಇರುತ್ತದೆ. ಈ ಯೋಚನೆ ಬಂದ ದಿನವೇ ಅನಾಥ ಮಕ್ಕಳನ್ನು ನನ್ನ ಜೊತೆ ಇರಿಸಿಕೊಳ್ಳಲು ಆರಂಭಿಸಿದೆ ಎಂದರು.