ಮಂಗಳೂರು, ಆ 22 (Daijiworld News/MSP): ಸಿನಿಮಾವನ್ನು ಉಪದೇಶ ಕೊಡುವುದಕ್ಕೋ, ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸಲೆಂದೋ ಅಥವಾ ಸಿನಿಮಾ ನೋಡಿ ಕಣ್ಣೀರು ಹಾಕಿಸಲೆಂದೋ ಮಾಡುವುದುಂಟು ಆದರೆ ಆರ್ .ಎಸ್ ಸಿನೆಮಾಸ್ ಬ್ಯಾನರ್ ನ ರೂಪೇಶ್ ಶೆಟ್ಟಿ, ರಾಕೇಶ್ ಕದ್ರಿ ನಿರ್ದೇಶನದ ಗಿರಿಗಿಟ್ ಮಾತ್ರ ತುಳು ಸಿನಿಪ್ರಿಯರ ನಾಡಿಮಿಡಿತವನ್ನು ಅರ್ಥಮಾಡಿಕೊಂಡಂತೆ ಕೇವಲ ಮನರಂಜನೆಗಷ್ಟೇ ಮೀಸಲಿರಿಸಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾದುದ್ದಕ್ಕೂ ಪ್ರೇಕ್ಷಕರನ್ನು ಅವರು ನಗಿಸುತ್ತಲೇ ಹೋಗಿದ್ದಾರೆ.
ಒಂದು ಕಂಪ್ಲೀಟ್ ಎಂಟರ್ಟೇನರ್ ಚಿತ್ರವೆಂದು ಹಲವಾರು ಬಾರಿ ನಟ ಕಂ ನಿರ್ದೇಶಕ ರೂಪೇಶ್ ಶೆಟ್ಟಿ ಹಲವು ಬಾರಿ ಹೇಳುತ್ತಾ ಬಂದಿದ್ದರು. ಅದನ್ನ ರೂಪೇಶ್ ಶೆಟ್ಟಿ ಆಂಡ್ ಟೀಂ ಚಾಚೂ ತಪ್ಪದೇ ಸಿನಿಮಾದಲ್ಲಿ ನಿರೂಪಿಸಿದ್ದಾರೆ. ಯಾಕೆಂದರೆ ಚಿತ್ರದ ಬಹುತೇಕ ದೃಶ್ಯಗಳನ್ನು ನಗಿಸಲಷ್ಟೇ ಮೀಸಲಿರಿಸಿದ್ದಾರೆ. ಒಟ್ಟಾರೆ ಸಿನಿಮಾ ಬಗ್ಗೆ ಹೇಳಬೇಕೆಂದರೆ "ಸಿಂಪಲ್ ಲವ್ ಸ್ಟೋರಿ ಹಾಗೂ ಭರ್ಜರಿ ನಗುವಿನ ಬಾಡೂಟ "
ಕನಸಲ್ಲಿ ಕಾಡುವ ಹುಡುಗಿಯ ’ಸ್ವಾತಿ ’ ಪ್ರೀತಿಯನ್ನು ಪಡೆಯಲು ಹಾಗೂ ಆಕೆಯನ್ನು ವಿವಾಹವಾಗಲು ನಾಯಕ ಸಿದ್ದು ಪಡುವ ಪಾಡು ಚಿತ್ರದ ವನ್ ಲೈನ್ ಸ್ಟ್ರೋರಿ. ಯಾವುದೇ ತರ್ಕವಿಲ್ಲದೇ, ನಿರಾಯಾಸವಾಗಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾ ಚಿತ್ರ ಮುಂದುವರಿಯುತ್ತಾ ಸಾಗುತ್ತದೆ. ಇದರೊಂದಿಗೆ ಚಿತ್ರ ಪ್ರತಿ ಪಾತ್ರಗಳೂ ಕೂಡ ಕಥೆಯಲ್ಲಿ ನಗುವಿನ ಹೂರಣವನ್ನು ತುಂಬುತ್ತಲೇ ಸಾಗುತ್ತದೆ.
ಕೀಳಾಭಿರುಚಿಯ ಹಾಸ್ಯ ಇಲ್ಲೂ ಇಲ್ಲದೆ ಸಹಜವೆಂಬಂತೆ ಸಾಗುವ ಪ್ಯಾಮಿಲಿ ಸಮೇತ ನೋಡಬಹುದಾದ ಚಿತ್ರ ಗಿರಿಗಿಟ್. 'ಗಿರಿಗಿಟ್'ನಲ್ಲಿ ನವೀನ್ ಡಿ. ಪಡೀಲ್,ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮುಂತಾದ ಹಾಸ್ಯ ಕಲಾವಿದರ ದಂಡೇ ಇದ್ದರೂ ಕಾಮಿಡಿ ಕಲಾವಿದರು ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿದ್ದಾರೆ.
ರೂಪೇಶ್ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಜೋಡಿ ಪ್ರೇಕ್ಷಕ್ಷರಿಗೆ ಇಷ್ಟವಾದ್ರೆ ಖಳನಾಯಕನಾಗಿ ರೋಶನ್ ಶೆಟ್ಟಿ ಗತ್ತು ಗಾಂಭಿರ್ಯದಿಂದಲೇ ಪ್ರೇಕ್ಷಕರ ಮನಗೆಲ್ಲುತ್ತಾರೆ. ಪ್ರಸನ್ನ ಶೆಟ್ಟಿ ಬೈಲೂರು ಬರೆದ ಸಂಭಾಷಣೆಗೆ ಪ್ರೇಕ್ಷಕರ ಶಿಳ್ಳೆ ಉತ್ತರವಾಗುತ್ತದೆ.
ರೂಪೇಶ್ ಶೆಟ್ಟಿ ಅವರ ಮೂಲಕಥೆಗೆ ರೂಪೇಶ್ ಹಾಗೂ ವಿನೀತ್ ಕುಮಾರ್ ರೈ ಚಿತ್ರಕಥೆಗೆ ಬರೆದಿದ್ದು ಡೇರಲ್ ಮಸ್ಕರೇನ್ಹಸ್ ಹಾಗೂ ಜೋಯೆಲ್ ರೆಬೆಲ್ಲೋ ಸಂಗೀತ, ನೃತ್ಯ ನಿರ್ದೇಶನ ನವೀನ್ ಶೆಟ್ಟಿ, ಸಂಕಲನ ರಾಹುಲ್ ವಸಿಷ್ಠ, ಸಹ ನಿರ್ದೇಶನ ಸುಮನ್ ಸುವರ್ಣ ಎಲ್ಲರೂ ಸಿನಿಮಾ ಉತ್ತಮವಾಗಲೆಂದು ಮತ್ತಷ್ಟು ದುಡಿದಿದ್ದಾರೆ.