ಮಂಗಳೂರು,ಆ 21(Daijiworld News/RD): ಕೋಸ್ಟಲ್ವುಡ್ನಲ್ಲಿ ಟೀಸರ್, ಟ್ರೈಲರ್ ಹಾಗೂ ಹಾಡಿನ ಮೂಲಕ ಪ್ರೇಕ್ಷಕರಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದ ಗಿರಿಗಿಟ್ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ವಿದೇಶಗಳಲ್ಲಿ ಬಿಡುಗಡೆಯಾಗುವ ಪ್ರಪ್ರಥಮ ತುಳು ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಕೋಸ್ಟಲ್ ವುಡ್ ನ ಸ್ಟಾರ್ ನಟ ರೂಪೇಶ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ‘ಗಿರಿಗಿಟ್’ ಸಿನಿಮಾದ ಟೀಸರ್ ಅಮೇರಿಕಾದಲ್ಲಿ ಬಿಡುಗಡೆಯಾಗಿದ್ದು, ಇದೀಗ ಚಿತ್ರವು ಯು.ಎ.ಇ., ಕತಾರ್, ಒಮನ್ ದೇಶಗಳಲ್ಲಿ ರಿಲೀಸ್ ಆಗಲು ತಯಾರಾಗಿದೆ. ಚಿತ್ರದ ಟೀಸರ್ ಬಿಡುಗಡೆಯಾದ ಆದ ಮೂರೇ ದಿನಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅದರಲ್ಲೂ ಲಾಯರ್ ವೇಷಧಾರಿ ಕೋ ’ದಂಡ’ ಅರವಿಂದ ಬೋಳಾರ್ ಅವರ ಡೈಲಾಗ್ ಕೇಳಿ ವೀಕ್ಷಕರು ಫಿದಾ ಆಗಿದ್ದಾರೆ. ಚಿತ್ರದಲ್ಲಿ ನವೀನ್ ಡಿ. ಪಡೀಲ್ ದಪ್ಪ ಮೀಸೆಯ ಮಿಲಿಟ್ರಿ ಆಫೀಸರ್ ಗೆಟಪ್ ನಲ್ಲಿ ಎಂಟ್ರಿ ನೀಡಲಿದ್ದು, ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಚಿತ್ರ ಮೂಡಿಸಿದೆ.
ಸಂಪೂರ್ಣ ಹಾಸ್ಯ ಪ್ರಧಾನ ಚಿತ್ರವಾದ ಗಿರಿಗಿಟ್ ಯುವ ಸಮುದಾಯವನ್ನು ಸೆಳೆಯುವ ಕಥೆಯನ್ನು ಹೊಂದಿದೆಯಂತೆ. ಧಾರಾವಾಹಿ ನಟಿ, ಶಿಲ್ಪಾ ಶೆಟ್ಟಿ ಅವರು ಈ ಚಿತ್ರದಲ್ಲಿ ರೂಪೇಶ್ ಗೆ ಜೋಡಿಯಾಗಿದ್ದು, ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ರೂಪೇಶ್ ಶೆಟ್ಟಿ ಅವರೇ ಬರೆದಿದ್ದಾರೆ. ಉಳಿದಂತೆ ಚಿತ್ರದಲ್ಲಿ ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮುಂತಾದ ಕಲಾವಿದರ ಬಳಗವನ್ನೇ ಹೊಂದಿದ್ದು ಮನರಂಜಿಸಲು ಸಜ್ಜಾಗಿದೆ.
ಇನ್ನು ಚಿತ್ರದ 'ಊರೇ ಮುರ್ಕಡ್ ...ಕರ್ಪ್ಯೂ ಪಾಡಡ್..' ಎಂಬ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಬಿಡುಗಡೆಯಾದ ಒಂದೇ ದಿನದಲ್ಲೇ ಈ ಹಾಡು ಯುಟ್ಯೂಬ್ ನಲ್ಲಿ ಸಾವಿರಕ್ಕೂ ಅಧಿಕ ಲೈಕ್ಸ್ ಗಳಿಸುವ ಮೂಲಕ ಕೋಸ್ಟಲ್ವುಡ್ನಲ್ಲಿ ಸದ್ದು ಮಾಡಿದೆ. ಗುರುಕಿರಣ್ ಹಾಗೂ ಪಲ್ಲವಿ ಪ್ರಭು ಹಾಡಿರುವ 'ಊರೇ ಮುರ್ಕಡ್ ...ಕರ್ಪ್ಯೂ ಪಾಡಡ್..' ಹಾಡಿಗೆ ಡರೆಲ್ ಮಸ್ಕರೇನಸ್ ಹಾಗೂ ಜೋಯೆಲ್ ರೆಬೆಲ್ಲೋ ಸಂಗೀತ ನೀಡಿದ್ದು, ಇದಕ್ಕೆ ಕೀರ್ತಿನ್ ಭಂಡಾರಿ ಅವರ ಸಾಹಿತ್ಯವಿದೆ. ಜೊತೆಗೆ ನವೀನ್ ಶೆಟ್ಟಿಯವರು ಕ್ಯಾಮೆರಾದಲ್ಲಿ ಸಹಕರಿಸಿದ್ದಾರೆ. ಇದೀಗ ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಈಗಾಗಲೇ ಜನರಲ್ಲಿ ಚಿತ್ರತಂಡ ಹಲವಾರು ನಿರೀಕ್ಷೆಗಳನ್ನು ಮೂಡಿಸಿ ತೆರೆಕಾಣಲು ರೆಡಿಯಾಗಿದೆ.