ಮಂಗಳೂರು,ಆ 18 (Daijiworld News/RD): ಸೌತ್ ಇಂಡಿಯನ್ ಇಂಟರ್'ನ್ಯಾಷನಲ್ ಮೂವೀ ಅವಾರ್ಡ್ -2019 (ಸೈಮಾ) ರಲ್ಲಿ ಉತ್ತಮ ಹಾಸ್ಯಕಲಾವಿದನೆಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಕೋಸ್ಟಲ್ ವುಡ್ ಮಾತ್ರವಲ್ಲದೆ ಸ್ಯಾಂಡಲ್ ವುಡ್ ನಲ್ಲಿಯೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಕರಾವಳಿಯ ಅಪ್ರತಿಮ ಕಲಾವಿದ ಸೌರಭ ಪ್ರಕಾಶ್ ಕೆ ತೂಮಿನಾಡ್, ಇದೀಗ ತಮ್ಮ ತಾಯ್ನಾಡಿಗೆ ಇಂದು ಮುಂಜಾನೆ ಆಗಮಿಸಿದ್ದಾರೆ. ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಬಂದಿಳಿದ ಇವರಿಗೆ ಕುಟುಂಬಸ್ಥರು ಹಾಗೂ ಸ್ನೇಹಿತರು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಬರಮಾಡಿಕೊಂಡರು.
ರಿಷಬ್ ಶೆಟ್ಟಿ ನಿದೇರ್ಶನದಲ್ಲಿ ಮೂಡಿಬಂದ ಕಾಸರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡುಗೆ ರಾಮಣ್ಣ ರೈ ಚಿತ್ರದಲ್ಲಿ ನಟಿಸಿದ ಸೌರಭ ಪ್ರಕಾಶ್ ಕೆ ತೂಮಿನಾಡ್, ಭುಜಂಗನ ಪಾತ್ರದಲ್ಲಿ ಮಿಂಚಿದ್ದು, ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವ ಮೂಲಕ, ಭುಜಂಗನಾಗಿ ಕನ್ನಡ ಚಿತ್ರರಂಗ ಸೇರಿದಂತೆ ಕರ್ನಾಟಕದಲ್ಲಿ ಚಿರಪರಿಚಿತರಾಗಿದ್ದರು. ಮೂಲತಃ ಮಂಗಳೂರಿನವರಾದ ಇವರು ಕತಾರ್ ನಲ್ಲಿ ನಡೆದ ಸೌತ್ ಇಂಡಿಯನ್ ಇಂಟರ್'ನ್ಯಾಷನಲ್ ಮೂವೀ ಅವಾರ್ಡ್ -2019 ಕನ್ನಡದ ಹಾಸ್ಯ ಕಲಾವಿದನಾಗಿ ಗೌರವಕ್ಕೆ ಪಾತ್ರರಾಗಿದ್ದು ಹೆಮ್ಮೆ ಪಡುವ ಸಂಗತಿ. ಕತಾರ್ ನಡೆದ ಈ ಸಮಾರಂಭವನ್ನು ಮುಗಿಸಿ ತಾಯ್ನಾಡಿ ಆಗಮಿಸಿರುವ ಸೌರಭ ಪ್ರಕಾಶ್ ಕೆ ತೂಮಿನಾಡ್ ಗೆ ಮಂಗಳೂರು ಏರ್ ಪೋರ್ಟ್ ನಲ್ಲಿ ಹೂ, ಹಾರ ನೀಡುವ ಮೂಲಕ ಕುಟುಂಬಸ್ಥರು ಹಾಗೂ ಸ್ನೇಹಿತರು ಆತ್ಮೀಯವಾಗಿ ಬರಮಾಡಿಕೊಂಡು ಅಭಿನಂದಿಸಿದರು.
ತುಳು ನಾಟಕದಿಂದ ತಮ್ಮ ಪಯಣವನ್ನು ಶುರು ಮಾಡಿದ ಸೌರಭ ಪ್ರಕಾಶ್ ಕೆ ತೂಮಿನಾಡ್ ಮಂಜೇಶ್ವರ ನಾಟಕ ತಂಡದಲ್ಲಿ ಕಲಾವಿದನಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಬಲೆ ತೆಲಿಪಾಲೆ, ಹಾಗು ತುಳು ಸಿನಿಮಾದಲ್ಲಿ ಅಭಿನಯಿಸಿದ ಇವರು, ಕನ್ನಡದಲ್ಲಿ ಮಜಾಭಾರತ ಕಾಮಿಡಿ ಶೋ ನಲ್ಲಿ ಹಾಸ್ಯ ಚಟಾಕಿಯ ಮೂಲಕ ತೀರ್ಪುಗಾರರನ್ನು, ಜನರನ್ನು ನಗೆಗಡಲಲ್ಲಿ ತೇಲಿಸಿ ಒಳ್ಳೆಯ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ. ಈ ರೀತಿಯ ಸಾಧನೆ ಮಾಡಿದ ತುಳುನಾಡಿನ ಸೌರಭ ಪ್ರಕಾಶ್ ಕೆ ತೂಮಿನಾಡ್ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ತುಳು ಚಿತ್ರರಂಗದ ನಿರ್ದೇಶಕರಾಗಿ, ಕಲಾವಿದರಾಗಲಿ ಹಾಜರಿರಲಿಲ್ಲ.
ದಕ್ಷಿಣ ಭಾರತದ ಅಂತರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಎಂಬ ಹೆಗ್ಗಳಿಕೆ ಪಡೆದಿರುವ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವೀ ಅವಾರ್ಡ್ 2019 'ಸೈಮಾ' ಕತಾರ್ ನಲ್ಲಿ ನಡೆದಿದ್ದು, ಸೌತ್ ಇಂಡಿಯಾದ ನಾಲ್ಕು ಭಾಷೆಗಳಾದ ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳ ಚಿತ್ರಲೋಕದಲ್ಲಿ ಅಭಿನಯಿಸಿದ ಉತ್ತಮ ಕಲಾವಿದನಿಗೆ ಈ ಗೌರವ ಪ್ರಶಸ್ತಿಯನ್ನು ನೀಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಉತ್ತಮ ಹಾಸ್ಯ ಕಲಾವಿದನೆಂಬ ಪ್ರಶಸ್ತಿಗೆ ತುಳುವ ಸೌರಭ ಪ್ರಕಾಶ್ ಕೆ ತೂಮಿನಾಡ್ ಪ್ರಶಸ್ತಿಯನ್ನು ಮುಡಿಗೇರಿಸುವ ಮೂಲಕ ತುಳುನಾಡಿನ ಕೀರ್ತಿಗೆ ಪಾತ್ರರಾಗಿದ್ದಾರೆ.