ಮಂಗಳೂರು, ಆ.05(Daijiworld News/SS): ಪೋಸ್ಟರ್ ಹಾಗೂ ಒಂದೊಂದು ಡೈಲಾಗ್ ಮೂಲಕವೇ ಸಾಮಾಜಿಕ ಜಾಲತಾಣದ ಮೂಲಕ ಸುದ್ದಿಯಲ್ಲಿರುವ ಸಿನೆಮಾ ‘ಗಿರಿಗಿಟ್. ಇದೀಗ ಈ ತುಳು ಚಿತ್ರದ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಾರಣ, ಈ ಚಿತ್ರದ ಹಾಡಿಗೆ ಯೋಧ ಅಭಿಷೇಕ್ ಟಿಕ್ ಟಾಕ್ ವಿಡಿಯೋ ಮಾಡಿರುವುದು.
"ವಂತೆ ಕಾಪುಲ ನಿನ್ನ ಪಲಯನ್ ಭಾವ ಮಲ್ಪಂದೆ ಬುಡಯೆ" ಎಂಬ ಹಾಡಿಗೆ ಯೋಧ ಅಭಿಷೇಕ್ ಟಿಕ್'ಟಾಕ್ ವಿಡಿಯೋ ಮಾಡಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಮಾತ್ರವಲ್ಲ, ಈ ಟಿಕ್'ಟಾಕ್ ವಿಡಿಯೋ ಇನ್ಸ್ಟ್ರಾಗ್ರಾಂ ಪೇಜ್ ನಲ್ಲಿ ವೈರಲ್ ಆಗಿದೆ.
ತುಳು ಚಿತ್ರರಂಗದಲ್ಲಿ ವಿಭಿನ್ನ ಪ್ರಚಾರದಲ್ಲಿಯೇ ಗಮನಸೆಳೆದಿರುವ ಗಿರಿಗಿಟ್ ಕೋಸ್ಟಲ್ವುಡ್ನಲ್ಲಿ ಹೊಸ ನಿರೀಕ್ಷೆ-ಭರವಸೆಯೊಂದಿಗೆ ತೆರೆಗೆ ಬರಲು ಕಾತುರವಾಗಿದೆ. ಕೊಂಚ ಮಟ್ಟಿಗೆ ಸಪ್ಪೆ ಆಗಿರುವ ಕೋಸ್ಟಲ್ವುಡ್ಗೆ ಹೊಸ ಲುಕ್ ಹಾಗೂ ಭವಿಷ್ಯ ಕಲ್ಪಿಸುವ ನೆಲೆಯಲ್ಲಿಯೂ ಗಿರಿಗಿಟ್ ಮೇಲೆ ಮಹತ್ತರ ಜವಾಬ್ದಾರಿಯಿದೆ. ಹೀಗಾಗಿಯೇ ಕೋಸ್ಟಲ್ವುಡ್ನಲ್ಲಿ ಹೊಸ ಮೂಡ್ ಕ್ರಿಯೇಟ್ ಮಾಡುವ ತುಡಿತದಲ್ಲಿ ಗಿರಿಗಿಟ್ ಇದೆ.
ರೂಪೇಶ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಸೇರಿದಂತೆ ಪ್ರಬುದ್ಧ ಕಲಾವಿದರು ಈ ಸಿನೆಮಾದಲ್ಲಿರುವ ಕಾರಣದಿಂದ ಗಿರಿಗಿಟ್ ಮೇಲೆ ಸಾಕಷ್ಟು ನಿರೀಕ್ಷೆ ಸುತ್ತಾಡುತ್ತಿದೆ.
ಗುರುಕಿರಣ್ ಹಾಗೂ ಪಲ್ಲವಿ ಪ್ರಭು ಹಾಡಿರುವ ‘ಊರೇ ಮುರ್ಕಡ್.. ಕರ್ಫ್ಯೂ ಪಾಡಡ್..’ ಹಾಡಿಗೆ ಡರೆಲ್ ಮಸ್ಕರೇನ್ಹಸ್ ಹಾಗೂ ಜೋಯೆಲ್ ರೆಬೆಲ್ಲೋ ಸಂಗೀತ ನೀಡಿದ್ದಾರೆ. ಕೀರ್ತನ್ ಭಂಡಾರಿ ಸಾಹಿತ್ಯವಿದೆ. ನವೀನ್ ಶೆಟ್ಟಿ ಕೆಮರಾದಲ್ಲಿ ಸಹಕರಿಸಿದ್ದಾರೆ.