ಮಂಗಳೂರು, ಆ2(Daijiworld News/RD): ಕೋಸ್ಟಲ್ವುಡ್ನಲ್ಲಿ ಭರ್ಜರಿ ಯಶಸ್ಸು ಕಾಣುವ ಮೂಲಕ ಭಾರೀ ಸದ್ದು ಮಾಡಿದ ಚಿತ್ರ ಚಾಲಿಪೋಲಿಲು. ಈ ಚಿತ್ರದ ಯಶಸ್ವಿ ನಿರ್ದೇಶಕ ವೀರೇಂದ್ರ ಶೆಟ್ಟಿ ಆಗಿದ್ದು, ಇದೀಗ ಅವರ ನಿರ್ದೇಶನದಿಂದ ಸವರ್ಣ ದೀರ್ಘ ಸಂಧಿ ಕನ್ನಡ ಭಾಷೆಯಲ್ಲಿ ಮೂಡಿ ಬರುತ್ತಿದ್ದು, ಗಾಂಧೀನಗರಕ್ಕೆ ಎಂಟ್ರಿ ಆಗಲು ರೆಡಿಯಾಗಿದೆ.
ಚಿತ್ರದಲ್ಲಿ ನಿರ್ದೇಶಕ ವೀರೇಂದ್ರ ಶೆಟ್ಟಿ ನಾಯಕನಾಗಿ ಅಭಿನಯಿಸಿದ್ದು, ಭಾವನಾ ಭಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸವರ್ಣ ದೀರ್ಘ ಸಂಧಿ ಸಿನಿಮಾವು ಪಕ್ಕಾ ಗ್ಯಾಂಗಸ್ಟರ್ ಕಾಮಿಡಿ ಸಿನಿಮಾವಾಗಿದ್ದು, ಇದೀಗ ಶೂಟಿಂಗೆಲ್ಲ ಮುಗಿಸಿ ಸೆನ್ಸಾರ್ ಬೋರ್ಡ್ ಬಳಿ ಹೋಗಿದ್ದು, ಹಲವಾರು ಕಲಾವಿದರನ್ನು ಚಿತ್ರ ಹೊಂದಿದೆ.
ಚಿತ್ರದ ಬಗ್ಗೆ ನಿರ್ದೇಶಕ ವೀರೇಂದ್ರ ಶೆಟ್ಟಿ ಸುದ್ದಿಗಾರರೊಂದಿಗೆ ಮಾತನಾಡಿ, ವ್ಯಾಕರಣವನ್ನೆ ಪ್ರಮುಖವಾಗಿಟ್ಟುಕೊಂಡು ರೌಡಿಸಂ ಕಥೆಯನ್ನು ಇದರ ಸುತ್ತಾ ಹೆಣೆಯಲಾಗಿದೆ. ವ್ಯಾಕರಣದ ಜೊತೆ ಕಾಮಿಡಿ ಸಿನಿಮಾ ಕನ್ನಡದಲ್ಲಿ ಕಡಿಮೆ ಬಂದಿದ್ದು, ಹಾಗಾಗಿ ಈ ಕಥೆಯನ್ನು ಆಯ್ಕೆ ಮಾಡಿದ್ದೇನೆ. ಇದೊಂದು ಸಂಪೂರ್ಣ ಕಾಲ್ಪನಿಕ ಚಿತ್ರವಾಗಿದೆ. ಅರೇಕಲ್, ಮೂಡಿಗೆರೆ, ದೇವರಾಯನ ದುರ್ಗಾದಲ್ಲಿ ಸಿನಿಮಾದ ಹಾಡಿನ ಶೂಟಿಂಗ್ ಮಾಡಲಾಗಿದೆ. ಮನೋಮೂರ್ತಿ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಚಿತ್ರ ಇದೀಗ ಸೆನ್ಸಾರ್ ಬೋರ್ಡ್ ಬಳಿ ಹೋಗಿದ್ದು, ಅಲ್ಲಿಂದ ಬಂದ ನಂತರ ಬಿಡುಗಡೆಗೊಳಿಸುವ ದಿನಾಂಕವನ್ನು ನಿಗದಿಪಡಿಸುತ್ತೇವೆ ಎಂದರು.