ಮಂಗಳೂರು, ಆ 1 (Daijiworld News/RD): ಕೋಸ್ಟಲ್ವುಡ್ನಲ್ಲಿ ಗಿರಿಗಿಟ್ ಚಿತ್ರವು ತನ್ನ ಟ್ರೈಲರ್ ಮೂಲಕವೇ ಜನರಲ್ಲಿ ನಿರೀಕ್ಷೆಯನ್ನು ಹುಟ್ಟಿಸಿತ್ತು, ಚಿತ್ರದಲ್ಲಿ ಕಾಮಿಡಿ ದೃಶ್ಯಗಳಿದ್ದು, ಜನರಿಗೆ ಮನರಂಜನೆ ನೀಡುವುದರ ಜೊತೆಗೆ ಅದ್ಭುತ ಸಂದೇಶವನ್ನು ನೀಡುವ ಚಿತ್ರವಾಗಿದೆ ಎಂದು ನಟ, ನಿರ್ದೇಶಕರಾದ ರೂಪೇಶ್ ಶೆಟ್ಟಿ ಅಭಿಪ್ರಾಯಪಟ್ಟಿದ್ದು, ಇದೀಗ ಚಿತ್ರವು ಬಿಡುಗಡೆಗೆ ಕ್ಷಣಗಣನೆ ಶುರುವಾಗಿದ್ದು, ಚಿತ್ರದ ಮೊದಲ ಹಾಡಿನ ಬಿಡುಗಡೆ ಸಮಾರಂಭ ನಿನ್ನೆ ದಯಾನಂದ ಪೈ - ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ರಥಬೀದಿ ಇದರ ಸಹಯೋಗದೊಂದಿಗೆ ಮಂಗಳೂರಿನ ಟೌನ್ ಹಾಲ್ ನಲ್ಲಿ 1500 ವಿದ್ಯಾರ್ಥಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.
ಇದೀಗ ಗಿರ್ಗಿಟ್ ಚಿತ್ರತಂಡ 'ಊರೇ ಮುರ್ಕಡ್ ...ಕರ್ಪ್ಯೂ ಪಾಡಡ್..' ಎಂಬ ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸಿದ್ದು, ಯೂಟ್ಯಬ್ ನಲ್ಲಿ ಬಿಡುಗಡೆಯಾದ ಒಂದು ದಿನದಲ್ಲೇ ಈ ಹಾಡು ಯುಟ್ಯೂಬ್ ನಲ್ಲಿ ಸಾವಿರಕ್ಕೂ ಅಧಿಕ ಲೈಕ್ಸ್ ಗಳಿಸುವ ಮೂಲಕ ಕೋಸ್ಟಲ್ವುಡ್ನಲ್ಲಿ ಸದ್ದು ಮಾಡಿದೆ. ಗುರುಕಿರಣ್ ಹಾಗೂ ಪಲ್ಲವಿ ಪ್ರಭು ಹಾಡಿರುವ 'ಊರೇ ಮುರ್ಕಡ್ ...ಕರ್ಪ್ಯೂ ಪಾಡಡ್..' ಹಾಡಿಗೆ ಡರೆಲ್ ಮಸ್ಕರೇನಸ್ ಹಾಗೂ ಜೋಯೆಲ್ ರೆಬೆಲ್ಲೋ ಸಂಗೀತ ನೀಡಿದ್ದಾರೆ. ಹಾಗೂ ಕೀರ್ತಿನ್ ಭಂಡಾರಿ ಅವರ ಸಾಹಿತ್ಯವಿದೆ. ಜೊತೆಗೆ ನವೀನ್ ಶೆಟ್ಟಿಯವರು ಕ್ಯಾಮೆರಾದಲ್ಲಿ ಸಹಕರಿಸಿದ್ದಾರೆ.
ಈ ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎ.ಸಿ. ಭಂಡಾರಿ ಅವರು ಉದ್ಘಾಟಿಸಿದರು. ಖ್ಯಾತ ತುಳು ಚಲನಚಿತ್ರ ನಟರಾದ ಶ್ರೀ ಭೋಜರಾಜ್ ವಾಮಂಜೂರು, ಗಿರಿಗಿಟ್ ಸಿನೆಮಾದ ನಟ ಹಾಗೂ ನಿರ್ದೇಶಕರಾದ ರೂಪೇಶ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ ಹೆಬ್ಬಾರ್ ಮುಖ್ಯ ಅತಿಥಿಗಳಾಗಿದ್ದರು, ಜೊತೆಗೆ ನಿರ್ಮಾಪಕರಾದ ಮಂಜುನಾಥ್ ಅತ್ತಾವರ್, ನಿರ್ದೇಶಕ ರಾಕೇಶ್ ಕದ್ರಿ, ತಾರಾನಾಥ ಶೆಟ್ಟಿ ಬೋಳಾರ್, ನೃತ್ಯ ನಿರ್ದೇಶಕ ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಿ.ಜೆ ವಿನೀತ್ ಕಾರ್ಯಕ್ರಮವನ್ನು ನಿರೂಪಿಸಿದರು.
ಈಗಾಗಲೇ ಚಿತ್ರದ ನಟ, ನಿರ್ದೇಶಕರಾದ ರೂಪೇಶ್ ಶೆಟ್ಟಿ ಆಡಿಯೋ ಲೀಕ್ ಆಗಿದೆ ಎಂದು ಖೇದ ವ್ಯಕ್ತಪಡಿಸಿದ್ದರು, ಇವೆಲ್ಲದರ ನಡುವೆ ಗಿರಿಗಿಟ್ ಚಿತ್ರ ತಂಡವು ಚಿತ್ರದ ಮೊದಲ ಹಾಡನ್ನು ಯಶಸ್ವಿಯಾಗಿ ಬಿಡುಗಡೆಗೊಳಿಸುವ ಮೂಲಕ ಪ್ರೇಕ್ಷಕ ವರ್ಗಕ್ಕೆ ಸಂತಸ ನೀಡಿದ್ದಾರೆ. ವಿಭಿನ್ನ ಪ್ರಚಾರದ ಮೂಲಕ ಗಮನಸೆಳೆದ ಗಿರಿಗಿಟ್ ಹೊಸ ಭರವಸೆಯೊಂದಿಗೆ ಹಲವಾರು ನಿರೀಕ್ಷೆಯ ಮೂಲಕ ತೆರೆಗೆ ಬರಲು ಸಜ್ಜಾಗಿ ನಿಂತಿದೆ. ಸಂಪೂರ್ಣ ಮನರಂಜನೆಯ ಚಿತ್ರವಾಗಿದ್ದು ಪ್ರೇಕ್ಷಕರಲ್ಲಿ ಹೊಸ ಬಗೆಯ ಮೂಡ್ ಕ್ರಿಯೇಟ್ ಮಾಡುವ ಕಾತುರದಲ್ಲಿದೆ ಗಿರಿಗಿಟ್.