ಮಂಗಳೂರು, ಜೂ 30 (Daijiworld News/RD): ಬಾಲಿವುಡ್ನಿಂದ ಹಿಡಿದು ಸ್ಯಾಂಡಲ್ ವುಡ್ ವರೆಗೆ ಹಲವಾರು ನಟ ನಟಿಯರನ್ನು ಪರಿಚಯಿಸಿದ ಕರಾವಳಿ, ಪ್ರತಿಭೆಗೇನು ಕೊರತೆಯಿಲ್ಲ. ಇದರಂತೆ ಹಲವಾರು ಪ್ರತಿಭೆಗಳು ವಿವಿಧ ಕ್ಷೇತ್ರದಲ್ಲಿ ತಮ್ಮ ಆಸೆ ಕನಸನ್ನು ಹೊತ್ತು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ ಅಂತವರಲ್ಲಿ ಮಂಗಳೂರು ಮೂಲದ ಕಾವೂರು ಕೆಐಓಸಿಲ್ ನ ತನುಜಾ ಪವಾರ್ ಕೂಡ ಒಬ್ಬರೂ.
ತನುಜಾ ಪವಾರ್ ಯುವ ಮತ್ತು ಪ್ರತಿಭಾವಂತ ಹುಡುಗಿಯಾಗಿದ್ದು ಇದೀಗ ಸ್ಯಾಂಡಲ್ ವುಡ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ತನುಜಾ ಪವಾರ್ ಅವರು ಲಕ್ಷ್ಮಣ್ ಪವಾರ್ ಮತ್ತು ಸಂಗೀತ ಪವಾರ್ ದಂಪತಿಗಳ ಪುತ್ರಿ. ಕಟಪಾಡಿ ಕಟಪ್ಪ ಚಿತ್ರದಲ್ಲಿ ನಟಿಸುವ ಮೂಲಕ ಕೋಸ್ಟಲ್ವುಡ್ಗೆ ಪಾದಾರ್ಪಣೆ ಮಾಡಿದರು. ಪೋಷಕ ಪಾತ್ರವನ್ನುನಿರ್ವಹಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜೊತೆಗೆ ಮಧು ಸೂರತ್ಕಲ್ ನಿರ್ದೇಶನದ ಕನ್ನಡ ಮತ್ತು ತುಳು ಟೆಲಿಫಿಲ್ಮ್ ಲೆಪ್ಪುಗಾ ಒಕ್ಕೊನೊಡಾದಲ್ಲಿ ನಟಿಸಿದ್ದಾರೆ. ತದ ನಂತರ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಕನ್ನಡ ಆಲ್ಬಮ್ ಸಾಂಗ್ ‘ಐ ಲವ್ ಯು ಅಂಧೇನಾ’ ಚಿತ್ರದಲ್ಲಿ ನಟಿಸಿದರು. ಪ್ರಸ್ತುತ ತನುಜಾ, ಶಾನ್ ನಿರ್ದೇಶನದ ಕನ್ನಡ ಚಿತ್ರ ‘ಸ್ಟೋರಿ ಆಫ್ ರಂಗ ಶಂಕರ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.ಜೊತೆಗೆ ಜೋಸೆಫ್ ನಿನಾಸಮ್ ನಿರ್ದೇಶನದ ’ರೋಹಿತಾಶ್ವಿನ್’ ಎಂಬ ತನ್ನ ಎರಡನೇ ಸ್ಯಾಂಡಲ್ವುಡ್ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದು, ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಡೈಜಿವರ್ಲ್ಡನೊಂದಿಗೆ ಮಾತನಾಡಿದ ತನುಜಾ ಪವಾರ್ "ನಾನು ಉತ್ತಮ ನರ್ತಕಿಯಾಗಿದ್ದು ಮತ್ತು ನಾನು ನನ್ನನ್ನು ದೂರದರ್ಶನದಲ್ಲಿ ನೋಡುವ ವ್ಯಾಮೋಹವನ್ನು ಹೊಂದಿದ್ದೆ. ನನ್ನ ವಿದ್ಯಾಭ್ಯಾಸದಿಂದ ನಾನು ವಿಚಲಿತರಾಗುವುದನ್ನು ನನ್ನ ಪೋಷಕರು ಬಯಸಲಿಲ್ಲ. ಮತ್ತೊಂದೆಡೆ ನಾನು ಆಡಿಷನ್ಗಾಗಿ ಕಾಯುತ್ತಿದ್ದೆ. ನನ್ನ ಆಪ್ತ ನಿತಿನ್ ಪುತ್ರನ್ ಸಲಹೆ ನೀಡಿದರ ಪರಿಣಾಮವಾಗಿ ಇಂದು ನನಗೆ ’ಕಟಪಾಡಿ ಕಟ್ಟಪ್ಪ’, ’ಸ್ಟೋರಿ ಆಫ್ ರಂಗ ಶಂಕರ್’ ಮತ್ತು ’ರೋಹಿತಾಶ್ವಿನ್’ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕಿತು. ಈಗಾಗಲೇ ನಾನು ಚಿತ್ರತಂಡಗಳಲ್ಲಿ ಕೆಲಸ ಮಾಡಿದ್ದು ಇಡೀ ತಂಡವ ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿತು. ಮತ್ತು ಚಿತ್ರೀಕರಣದ ಸಮಯದಲ್ಲಿ ಅನೇಕ ವಿಷಯಗಳನ್ನು ಕಲಿತೆ ಎಂದರು.
ತನುಜಾ ತನ್ನ ಬಿಕಾಂ ಪದವಿಯನ್ನು ಮಹೇಶ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ನಿಂದ ಪೂರ್ಣಗೊಳಿಸಿದ್ದು, ಅಲ್ಲಿ ಪ್ರಾಂಶುಪಾಲರಿಂದ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗ ತನ್ನ ನಟನಾ ವೃತ್ತಿಯನ್ನು ಬದಿಗಿಟ್ಟು ತನುಜಾ ಎಂಬಿಎ ವ್ಯಾಸಂಗ ಮಾಡಲು ಬಯಸುತ್ತಿದ್ದಾರೆ.