ಮಂಗಳೂರು, ಜು 28 (Daijiworld News/RD): ಲುಂಗಿ ಟೈಟಲ್ನಲ್ಲಿಯೇ ಕಿಕ್ ಕೊಡುವ ಒಂದು ರೊಮ್ಯಾಂಟಿಕ್ ಕಾಮಿಡಿ ಕನ್ನಡ ಸಿನೆಮಾ ಆಗಿದ್ದು, ಚಿತ್ರದ ಟೀಸರ್ ಮೂಲಕವೇ ಜನರಲ್ಲಿ ನಿರೀಕ್ಷೆಯನ್ನು ಹುಟ್ಟಿಸಿದೆ. ಸಿನಿಮಾ ಕನ್ನಡವಾದರೂ ಮಂಗಳೂರು ಭಾಷೆಗೆ ಬಲುಹತ್ತಿರವಾದ ಸಂಭಾಷಣೆ ಹೊಂದಿದೆ. ಖಾರ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರ ಸೆಪ್ಟೆಂಬರ್ನಲ್ಲಿ ಬಿಡುಗಡೆಗೊಳ್ಳುವುದು ಬಹುತೇಕ ಪಕ್ಕ ಆಗಿದೆ.
ಕರಾವಳಿಯ ಮೂಲದ ಮುಖೇಶ್ ಹೆಗ್ಡೆ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಅಕ್ಷಿತ್ ಶೆಟ್ಟಿಯವರ ಕಥೆಗೆ ಅರ್ಜುನ್ ಲೂವಿಸ್ ಚಿತ್ರಕಥೆ-ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ಮೊಟ್ಟ ಮೊದಲ ಬಾರಿಗೆ ನಿರ್ದೇಶಕರಾಗಿ ಅರ್ಜುನ್ ಲೂವಿಸ್ ಮತ್ತು ಅಕ್ಷಿತ್ ಶೆಟ್ಟಿ ಜೊತೆಯಾಗಿದ್ದಾರೆ. ಇನ್ನೂ ಚಿತ್ರದಲ್ಲಿ ಪ್ರಣವ್ ಹೆಗ್ಡೆ ನಾಯಕನ ಪಾತ್ರ ಮಾಡಿದ್ದು, ನಾಯಕಿಯಾಗಿ ಅಹಲ್ಯಾ ಸುರೇಶ್ ಮತ್ತು ರಾಧಿಕಾ ರಾವ್ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ಒಂದು ಮೊಟ್ಟೆ ಖ್ಯಾತಿಯ ಪ್ರಕಾಶ್.ಕೆ.ತೂಮಿನಾಡು, ದೀಪಕ್ ರೈ ಪಾಣಾಜೆ, ವಿಜೆ ವಿನೀತ್, ರೂಪ ವರ್ಕಾಡಿ, ರಂಗಿತರಂಗ ರಫೀಕ್ ಖ್ಯಾತಿಯ ಕಾರ್ತಿಕ್ ವರದರಾಜು ನಟಿಸಿದ್ದಾರೆ.
ಲುಂಗಿ ಚಿತ್ರಕ್ಕೆ ಪ್ರಸಾದ್.ಕೆ.ಶೆಟ್ಟಿ ಸಂಗೀತವಿದ್ದು, ರೀಜೊ.ಪಿ.ಜಾನ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ರಕ್ಷಿತ್ ರೈ ಸಹ-ನಿರ್ದೇಶನ, ಮಹೇಶ್ ಯೆಣ್ಮೂರು ಕಲೆ, ಸತೀಶ್ ಬ್ರಹ್ಮಾವರ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ತಂಡದಲ್ಲಿ ಕೆಲಸ ನಿರ್ವಹಿಸಿದ್ದಾರೆ. ರಂಗಾಯಣ ಖ್ಯಾತಿಯ ವಿದ್ದು ಉಚ್ಚಿಲ ಮತ್ತು ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್.ಬಿ.ಶೆಟ್ಟಿಯವರು ನಟನೆಯ ಪಟ್ಟುಗಳನ್ನು ಕಲಿಸಿದ್ದಾರೆ.
ಯುವಪೀಳಿಗೆಗೆ ಒಂದು ಸಂದೇಶ ಸಾರುವ ಚಿತ್ರ ಲುಂಗಿಯಾಗಿದ್ದು, ಯಾವುದೇ ರೀತಿಯ ದೃಶ್ಯಗಳನ್ನು ಕಟ್ ಮತ್ತು ಮ್ಯೂಟ್ ಮಾಡದೆ ಚಿತ್ರಕ್ಕೆ ಸೆನ್ಸಾರ್ ಬೋರ್ಡ ’ಯು’ ಪ್ರಮಾಣ ಪತ್ರವನ್ನು ನೀಡಿದೆ. ಚಿತ್ರವು ಸೆಪ್ಟೆಂಬರ್ನಲ್ಲಿ ತೆರೆಕಾಣಲು ಸಜ್ಜಾಗಿದ್ದು, ಲುಂಗಿಯನ್ನು ಎತ್ತಿ ಕಟ್ಟುವ ಹುಮ್ಮಸ್ಸಿನಲ್ಲಿದೆ.