ಬೆಂಗಳೂರು, ಜು 24 (Daijiworld News/RD): ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಜ್ಜೆ ಹಾಕಿದ ಯುವ ನಟಿ ರಶ್ಮಿಕಾ ಮಂದಣ್ಣ. ಕನ್ನಡ ಭಾಷೆಯಲ್ಲೂ ಹಲವಾರು ಚಿತ್ರಗಳಲ್ಲಿ ನಟಿಸಿರುವ ಇವರು ತೆಲುಗು ಭಾಷೆಯಲ್ಲಿ ನಟ, ವಿಜಯ್ ದೇವರಕೊಂಡನಿಗೆ ಜೊತೆಯಾಗಿ ಗೀತ ಗೋವಿಂದಂ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಹುದೊಡ್ಡ ಯಶಸ್ಸನ್ನು ತಮ್ಮದಾಗಿಸಿಕೊಂಡು ಅಭಿಮಾನಿ ಬಗಳವನ್ನೇ ಹೊಂದಿರುತ್ತಾರೆ.
ಇತ್ತೀಚೆಗೆ ತೆರೆಕಾಣಲು ಸಜ್ಜಾಗಿರುವ ತೆಲುಗಿನ ಡಿಯರ್ ಕಾಮ್ರೇಡ್ ಕನ್ನಡ ಅವತರಣಿಕೆಯ ಕುರಿತು ಕೆಲವು ದಿನಗಳ ಹಿಂದೆ ತಮಿಳು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನನಗೆ ಕನ್ನಡ ಪದವನ್ನು ಸರಿಯಾಗಿ ಉಚ್ಚರಿಸಲು ಸಾಧ್ಯವಿಲ್ಲ, ಕನ್ನಡ ಬಲು ಕಷ್ಟ ಎಂದು ಹೇಳಿದ್ದರು. ಇವರ ಈ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದು, ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಕನ್ನಡ ಚಲನಚಿತ್ರ ರಂಗದಿಂದ ರಶ್ಮಿಕಾರನ್ನು ಬಹಿಷ್ಕರಿಸುವಂತೆ ಒತ್ತಾಯಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ಮುಂದಾಗಿದ್ದರು.
ರಶ್ಮಿಕಾರ ಈ ಹೇಳಿಕೆಯ ಕುರಿತು ಟ್ವೀಟ್ ಮಾಡಿದ ನವರಸನಾಯಕ ಜಗ್ಗೇಶ್ "ಪರ ರಾಜ್ಯಗಳಿಗೆ ಹೋಗಿ ಅಲ್ಲಿನ ಭಾಷೆ ಕಲಿಯುವುದರ ಜೊತೆಗೆ ಕನ್ನಡ ಪ್ರೇಮವನ್ನು ಮೆರೆಸುವ ಜನರ ನಡುವೆ, ಕನ್ನಡ ಗೊತ್ತಿಲ್ಲ ಎಂದು ಹೇಳುವ ಕನ್ನಡಿಗರಿರುವುದು ದುರಾದೃಷ್ಟಕರ. ಕನ್ನಡ ಚಿತ್ರರಂಗದ ಆಶೀರ್ವಾದ ಪಡೆದು ಬೆಳೆದು ಪರಭಾಷೆಗೆ ಹೋಗಿ ಅಲ್ಲಿಯು ಬೆಳೆದ ಅನೇಕ ಸ್ನೇಹಿತರಿದ್ದಾರೆ! ಅವರೆಲ್ಲ ಇಂದು ಕನ್ನಡದಲ್ಲೆ ಮಾತಾಡಿ ಕನ್ನಡವನ್ನ ಅಪಾರ ಗೌರವಿಸುತ್ತಾರೆ ಅದು ಅವರ ಕನ್ನಡದ ಸಂಸ್ಕೃತಿ! ಆ ಗುಣವಿರದ ಇಂದಿನ ಪೀಳಿಗೆಯ ನಡೆ ದುರಾದೃಷ್ಟಕರ! ಕನ್ನಡ ಪ್ರೇಕ್ಷಕನ ಚಪ್ಪಾಳೆ ಬಿದ್ದೆ ನಿಮ್ಮ ಬೆಳವಣಿಗೆ ಆದದ್ದು ನೆನಪಿರಲಿ!" ಎಂದು ಹೇಳಿದರು.
‘ಡಿಯರ್ ಕಾಮ್ರೇಡ್’ ಚಿತ್ರವು ಕನ್ನಡ ಅವತರಣಿಕೆಯಲ್ಲಿ ಬಿಡುಗಡೆಗೊಳ್ಳಲಿದ್ದು, ರಶ್ಮಿಕಾ ಅವರೇ ಈ ಚಿತ್ರವನ್ನು ಡಬ್ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ರಶ್ಮಿಕಾರಿಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ, ಜೊತೆಗೆ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವಾಗ ಆಂಗ್ಲ ಭಾಷೆಯನ್ನು ಹೆಚ್ಚಾಗಿ ಬಳಸುವುದನ್ನು ಕಂಡು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಟೀಕಿಸಿದ್ದಾರೆ.