ಬೆಂಗಳೂರು, ಜು22 (Daijiworld News/RD): ಕನ್ನಡ ಮಾತನಾಡೋದು ತುಂಬಾನೇ ಕಷ್ಟ ಅಂತಾ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರೋ ರಶ್ಮಿಕಾ ಮಂದಣ್ಣರನ್ನು ಕನ್ನಡ ಚಲನಚಿತ್ರ ರಂಗದಿಂದ ಬಹಿಷ್ಕರಿಸುವಂತೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ಮುಂದಾಗಿದ್ದಾರೆ.
ಕರ್ನಾಟಕ ಮೂಲದ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿಯ ಮೂಲಕ ಚಿತ್ರರಂಗ ಪ್ರವೇಶಿಸಿ ಖ್ಯಾತಿಯಾಗಿದ್ದಾರೆ. ಈ ಚಿತ್ರ ಬಹಳಷ್ಟು ಸದ್ದು ಮಾಡುವ ಮೂಲಕ ಅಭಿಮಾನಿ ಬಳಗವನ್ನೇ ಹೊಂದಿರುವ ರಶ್ಮಿಕಾ, ಇತ್ತೀಚೆಗೆ ಕನ್ನಡ ಸೇರಿ ತಮಿಳು, ತೆಲುಗು ಭಾಷೆಯ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಟಾಲಿವುಡ್ ನ ಗೀತ ಗೋವಿಂದಂ, ಚಲೋ ಸಿನಿಮಾಗಳಲ್ಲಿ ನಟಿಸಿದ ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಹೆಸರುವಾಸಿಯಾಗಿದ್ದಾರೆ. ಕರ್ನಾಟಕದವರು ಹೆಮ್ಮ ಪಡುವ ನಟಿ ರಶ್ಮಿಕಾ ಮಂದಣ್ಣ ಆಗಿದ್ದು, ಅವರು ಬಿಡುಗಡೆಗೆ ಸಜ್ಜಾಗುತ್ತಿರುವ ‘ಡಿಯರ್ ಕಾಮ್ರೇಡ್’ ಕನ್ನಡ ಅವತರಣಿಕೆಯ ಕುರಿತು ಕೆಲವು ದಿನಗಳ ಹಿಂದೆ ತಮಿಳು ಸಂದರ್ಶನವೊಂದರಲ್ಲಿ ಮಾತನಾಡಿ ನನಗೆ ಕನ್ನಡ ಪದವನ್ನು ಸರಿಯಾಗಿ ಉಚ್ಚರಿಸಲು ಸಾಧ್ಯವಿಲ್ಲ ಕನ್ನಡ ಬಲು ಕಷ್ಟ ಎಂದು ಸ್ಪಷ್ಟನೆಯನ್ನೂ ನೀಡಿದ್ದರು.
‘ಡಿಯರ್ ಕಾಮ್ರೇಡ್’ ಚಿತ್ರವು ಕನ್ನಡ ಅವತರಣಿಕೆಯಲ್ಲಿ ಬಿಡುಗಡೆಗೊಳ್ಳಲಿದ್ದು, ರಶ್ಮಿಕಾ ಅವರೇ ಈ ಚಿತ್ರವನ್ನು ಡಬ್ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ರಶ್ಮಿಕಾರಿಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ, ಜೊತೆಗೆ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವಾಗ ಆಂಗ್ಲ ಭಾಷೆಯನ್ನು ಹೆಚ್ಚಾಗಿ ಬಳಸುವುದನ್ನು ಕಂಡು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಟಿಯ ಕಾಲೆಳೆದಿದ್ದಾರೆ.
ಕನ್ನಡ ಭಾಷೆಯ ಬಗೆಗಿರುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ ರಶ್ಮಿಕಾ ಮಂದಣ್ಣ. ಇವರ ಈ ಹೇಳಿಕೆ ಅಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಹೀಗಾಗಿ ಕನ್ನಡ ಚಲನಚಿತ್ರ ರಂಗದಲ್ಲಿ ಅವಕಾಶ ನೀಡಬಾರದು ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.