ಮಂಗಳೂರು, ಜು 20(Daijiworld News/RD): ಕರಾವಳಿಯು ಪ್ರತಿಭೆಯ ದೊಡ್ಡ ಆಗರವಾಗಿದ್ದು, ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಪ್ರತಿಭೆಯನ್ನು ಪ್ರದರ್ಶನ ಮಾಡುವ ಮೂಲಕ ವಿಶೇಷ ಸಾಧನೆ ಮಾಡುತ್ತಾ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ರೀತಿಯಾಗಿ ತನ್ನ ಆಸೆ ಕನಸುಗಳನ್ನು ಹೊತ್ತು ಕಿರುತೆರೆಯಿಂದ ಬೆಳ್ಳಿತೆರೆಗೆ ಹೆಜ್ಜೆ ಹಾಕುತ್ತಿರುವ ಭರವಸೆಯ ಪ್ರತಿಭೆ ನಿಕಿತಾ ದೊರ್ತೋಡಿ.
ದರ್ಣಪ್ಪ ದೊರ್ತೋಡಿ ಮತ್ತು ಸುಕನ್ಯಾ ಎಸ್ ಅವರ ಪುತ್ರಿಯಾದ ಇವರು, ಮೂಲತಃ ಉಪ್ಪಿನಂಗಡಿಯವರು. ಗ್ಲಾಮರ್ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಬೇಕು ಅನ್ನುವ ಅವರು ಕನ್ನಡದಲ್ಲಿ ಮಂಜು ಮಂಡವ್ಯ ನಿರ್ದೇಶನದ ‘ಭರತ ಬಾಹುಬಲಿ’ ಚಿತ್ರದಲ್ಲಿ ಮನೋವೈದ್ಯರ ಪಾತ್ರಕ್ಕೆ ಜೀವ ತುಂಬಿದ್ದಾರೆ.
"ನಿರ್ದೇಶಕ ಮಂಜು ಮಂಡವ್ಯ ಅವರೊಂದಿಗೆ ಕೆಲಸ ಮಾಡಿ ಒಂದು ಒಳ್ಳೆಯ ಅನುಭವವು ನನಗೆ ಸಿಕ್ಕಿದೆ. ಚಲನಚಿತ್ರ ನಿರ್ಮಾಣದಲ್ಲಿ ಪ್ರತಿಯೊಂದು ನಿಮಿಷ ಕೂಡ ತುಂಬಾ ಮುಖ್ಯ. ಹಾಗೂ ಈ ಒಂದು ಅನುಭವ ಒಳ್ಳೆಯ ಪಾಠ ಕಲಿಸಿದೆ. ಸಾಕಷ್ಟು ಜ್ಞಾನವನ್ನು ಈ ಕ್ಷೇತ್ರವು ನೀಡಿದೆ" ಎಂದು ನಿಕಿತಾ ದೊರ್ತೋಡಿ ಹೇಳುತ್ತಾರೆ.
ಸ್ಟಾರ್ ಸುವರ್ಣ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಧಾರಾವಾಹಿ ‘ಸತ್ಯಂ ಶಿವಮ್ ಸುಂದರಂ’ ಮೂಲಕ ಕಿರುತೆರೆ ಪ್ರವೇಶಿಸಿದ ಇವರು, ಟೀನಾಳ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಬಾಲ್ಯದಲ್ಲಿಯೇ ಸಂಗೀತದತ್ತ ಒಲವು ಮಾಡಿದ ಈಕೆ, ಸಂಗೀತದ ಬೀಟ್ಗಳಿಗೆ ನೃತ್ಯ ಮಾಡುವುದನ್ನು ಕರಗತ ಮಾಡಿಕೊಂಡರು. ತಾನು ಮೂರನೇ ತರಗತಿಯಲ್ಲಿ ಭರತನಾಟ್ಯವನ್ನು ಕಲೆಯನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ನಟನೆಯ ಬಗೆಗಿನ ಅಪಾರ ಒಲವು ನನ್ನನ್ನು ಈ ರಂಗದಲ್ಲಿ ಬೆಳೆಯುವಂತೆ ಮಾಡಿತು ಎನ್ನುತ್ತಾರೆ ನಿಕಿತಾ ದೊರ್ತೋಡಿ. ಈ ರೀತಿಯಾಗಿ ಸಣ್ಣಪರದೆಯ ಮೂಲಕ ಸಿನಿ ಪ್ರಯಾಣ ಮಾಡುತ್ತಿರುವ ಇವರು ಇನ್ನಷ್ಟು ಸಾಧನೆ ಮಾಡವಂತಾಗಲಿ.