ಬೆಂಗಳೂರು, ಜು 13 (Daijiworld News/MSP): ಶುಕ್ರವಾರ ಕರ್ನಾಟಕದಾದ್ಯಂತ ಬಿಡುಗಡೆಯಾದ ಬಹುನಿರೀಕ್ಷಿತ 'ಯಾನ' ಸಿನೆಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಶಸ್ವಿ ಓಟದತ್ತ ದಾಪುಗಾಲು ಇಡುತ್ತಿದೆ.
ಯಾನ ಸಿನೆಮಾವು ಚಿತ್ರೀಕರಣದಿಂದ ಹಿಡಿದು ಬಿಡುಗಡೆಯ ವರೆಗೂ ಒಂದದಲ್ಲ ಒಂದು ರೀತಿಯಲ್ಲಿ ಕನ್ನಡ ಚಿತ್ರ ರಂಗವನ್ನು ತನ್ನತ್ತ ನೋಡುವಂತೆ ಮಾಡುತ್ತಲೇ, ಸಿನಿಪ್ರಿಯರಲ್ಲಿ ಸಿನಿಮಾದ ಬಗ್ಗೆ ನಿರೀಕ್ಷೆಯನ್ನು ಹೆಚ್ಚಿಸುತ್ತಲೇ ಬಂದಿದ್ದು, ಈಗ ಸಿನೆಮಾ ನೋಡಿದ ಮಂದಿ ಶಹಬಾಷ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದಿನ ಯುವ ಪೀಳಿಗೆಯಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಒಟ್ಟಿಗೆ ಕೂತು ನೋಡುವಂಥ ಕಥೆಯನ್ನಿಟ್ಟುಕೊಂಡು ನಿರ್ದೇಶಕಿ ವಿಜಯ ಲಕ್ಷ್ಮಿ ಸಿಂಗ್ ಸಿನೆಮಾ ಮಾಡಿದ್ದಾರೆ.
'ಯಾನ'ದಲ್ಲಿ ಸ್ಟೂಡೆಂಟ್ ಲೈಫ್ ಅನ್ನು ಸ್ಟೈಲಿಶ್ ಆಗಿ, ಬೋಲ್ಡ್ ಆಗಿ ತೋರಿಸಲಾಗಿದೆ. ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಬಹಳ ಅಚ್ಚುಕಟ್ಟಾಗಿ, ಸುಂದರವಾಗಿ, ಸಹಜವಾಗಿ, ಅಷ್ಟೇ ಪ್ರಾಮಾಣಿಕವಾಗಿ ಚಿತ್ರಕತೆ ಮಾಡಿದ್ದಾರೆ.
ಸಿನೆಮಾ ನೋಡಿದ ಮಂದಿ ಸಿನೆಮಾವನ್ನು ಮನಸಾರೆ ಬಣ್ಣಿಸಿದ್ದಾರೆ. ಹೊಸ ನಾಯಕ-ನಟಿಯರ ನಟನೆ, ನವಿರಾದ ಚಿತ್ರ ಕಥೆ, ಸಂಗೀತ, ಹಿನ್ನೆಲೆ ಸಂಗೀತ, ಚಿತ್ರೀಕರಿಸಲಾದ ಸ್ಥಳಗಳ ಬಗ್ಗೆ ಸಿನಿ ಪ್ರಿಯರು ಮುಕ್ತಕಂಠದಿಂದ ಮೆಚ್ಚುಗೆ ವ್ಯಕ್ತಪಡಿದ್ದಾರೆ.
ನಟ ಜೈಜಗದೀಶ್ ಹಾಗು ವಿಜಯ ಲಕ್ಷ್ಮಿ ಸಿಂಗ್ ಪುತ್ರಿಯರಾದ ವೈಭವಿ, ವೈನಿಧಿ ಮತ್ತು ವೈಸಿರಿ 'ಯಾನ' ಮೂಲಕ ಸ್ಯಾಂಡಲ್ ವುಡ್'ಗೆ ಎಂಟ್ರಿ ನೀಡಿದ್ದು, ಅವರ ಮೊದಲ ಚಿತ್ರವೇ ಯಶಸ್ವಿನತ್ತ ಸಾಗುತ್ತಿದೆ.
ಹಿರಿಯ ನಟ ಅನಂತ್ ನಾಗ್ ಮತ್ತು ಸುಹಾಸಿನಿ ಈ ಸಿನೆಮಾದಲ್ಲಿ ಮತ್ತೆ ಬಣ್ಣ ಹಚ್ಚಿರುವುದು ಮತ್ತೊಂದು ಹೆಗ್ಗಳಿಕೆಯಾಗಿದೆ. ನಾಯಕರಾಗಿ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್ ನಟಿಸಿದ್ದು,ಇವರಿಗೆ ಇದು ಮೊದಲ ಸಿನೆಮಾವಾಗಿದೆ.
ವಿಜಯಲಕ್ಷ್ಮೀಸಿಂಗ್ ಅವರು ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿಜಯಲಕ್ಷ್ಮೀಸಿಂಗ್ ಹಾಗೂ ಸುಹಾಸ್ ಗಂಗಾಧರ್ ಚಿತ್ರಕಥೆ ಬರೆದಿದ್ದಾರೆ.
ಸಿನೆಮಾವನ್ನು ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಹಾಗು 'ಐ' ಎಂಟರ್ಟೈನ್ಮೆಂಟ್'ನ ವಿಜಯಲಕ್ಷಿ ಸಿಂಗ್ ನಿರ್ಮಿಸಿದ್ದಾರೆ.
ನಟಿಯರಾದ ವೈಭವಿ, ವೈನಿಧಿ, ವೈಸಿರಿ ಹಾಗು ನಾಯಕರಾದ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್ ನಟನೆಗೆ ಜನ ಫಿದಾ ಆಗಿದ್ದಾರೆ. ಜೊತೆಗೆ ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ರವಿ ಶಂಕರ್, ಓಂ ಪ್ರಕಾಶ್ ರಾವ್, ರಾಮಕೃಷ್ಣ, ಸುಂದರರಾಜ್, ಗಡ್ದಪ್ಪ ಅವರ ನಟನೆಯೂ ಚಿತ್ರಕ್ಕೆ ಮತ್ತಷ್ಟು ಗಟ್ಟಿತನವನ್ನು ತಂದಿದೆ.
ಹುಡುಗಿಯರ ಜೀವನದಲ್ಲಿ ಕೆಲವೊಂದು ಸಂದಿಗ್ಧ ಪರಿಸ್ಥಿತಿ ಉಂಟಾದಾಗ ಕೊನೆಗೆ ಕಾಣುವುದು ಆತ್ಮಹತ್ಯೆಯಂತ ಸಾವಿನ ಬಾಗಿಲು. ಆದರೆ 'ಯಾನ'ದಲ್ಲಿ ಹುಡುಗಿಯರು ತಮಗೊದಗುವ ಕಷ್ಟದ ಸನ್ನಿವೇಶಗಳು, ವಿಚಾರಗಳನ್ನು ಮೆಟ್ಟಿ ನಿಂತು ಹೇಗೆ ಎದುರಿಸುತ್ತಾರೆ ಎಂಬುದನ್ನು ಎತ್ತಿ ತೋರಿಸಲಾಗಿದೆ. ಜೊತೆಗೆ ಕೊನೆಗೆ ಒಳ್ಳೆಯ ಸಂದೇಶವನ್ನು ಇಂದಿನ ಜನರಿಗೆ ನೀಡಲಾಗಿದೆ. ಒಟ್ಟಾರೆ ಸಿನೆಮಾ ಬಗ್ಗೆ ಎಲ್ಲ ಆಯಾಮಗಳಲ್ಲೂ ಉತ್ತಮ ಪ್ರತಿಕ್ರಿಯೆ, ಮೆಚ್ಚುಗೆ ವ್ಯಕ್ತವಾಗಿದೆ.
ಸಿನೆಮಾವನ್ನು ಚಿತ್ರದುರ್ಗ, ದಾವಣಗೆರೆ, ಮೂಡಿಗೆರೆ, ಉತ್ತರಕರ್ನಾಟಕದ ಯಾನ ಸೇರಿದಂತೆ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಮೂಲಕ ಕರ್ನಾಟದಲ್ಲಿರುವ ಪ್ರವಾಸೋದ್ಯಮ ತಾಣಗಳನ್ನು ಮತ್ತಷು ಜನರಿಗೆ ಪರಿಚಯಿಸಿದೆ.
ಸುನಿ ಹಾಗೂ ಅಭಿಷೇಕ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ದಾರೆ. ಕರ್ಮ್ ಚಾವ್ಲಾ ಅವರ ಛಾಯಾಗ್ರಹಣ ಜಬರ್ದಸ್ತ್ ಆಗಿದೆ. ಹಾಡು ಒಂದಕ್ಕಿಂತ ಒಂದು ಕೇಳಲು ಚೆನ್ನಾಗಿದೆ.
ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಹಾಡುಗಳನ್ನು ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಹೃದಯ ಶಿವ, ಶಶಾಂಕ್ ಹಾಗೂ ಚೇತನ್ ಕುಮಾರ್ ಬರೆದಿದ್ದಾರೆ.