ಮಂಗಳೂರು, ಜು 02 (Daijiworld News/MSP): 'ಸ್ವರ್ಣ ಕಮಲ' ರಾಷ್ಟ್ರ ಪ್ರಶಸ್ತಿ ಪಡೆದ ಹಾಗೂ ಮೊತ್ತ ಮೊದಲಬ್ಯಾರಿ ಭಾಷೆಯ‘ಬ್ಯಾರಿ’ ಹೆಸರಿನ ಚಲನ ಚಿತ್ರವನ್ನು ಪ್ರದರ್ಶಿಸಬಾರದು ಎಂದು ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಸಾಹಿತಿ ಸಾರಾ ಅಬೂಬಕರ್ ಅವರ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಕೃತಿಯ ಕತೆಯನ್ನು ಕೃತಿಚೌರ್ಯವೆಸಗಿ ನಿರ್ಮಿಸಿರುವುದಾಗಿ ಮಾಡಿದ್ದ ಆಪಾದನೆಯನ್ನು ನಗರದ ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಎತ್ತಿ ಹಿಡಿಸಿದ್ದು. ಈ ಚಿತ್ರವನ್ನು ಇನ್ನು ಮುಂದೆ ಎಲ್ಲೂ ಪ್ರದರ್ಶಿಸಬಾರದು ಎಂದು ಆದೇಶಿಸಿದೆ.
ಅಲ್ತಾಫ್ ಹುಸೇನ್ ಎಂಬವರು ಈ ಚಿತ್ರವನ್ನು ನಿರ್ಮಿಸಿ, ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರವನ್ನು ಸುವೀರನ್ ಎಂಬುವರು ನಿರ್ದೇಶಿಸಿದ್ದರು. 59ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ‘ಬ್ಯಾರಿ’ ಚಿತ್ರ ಸ್ವರ್ಣಕಮಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.
ಈ ಸಿನಿಮಾ ಸ್ವರಚಿತ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಕೃತಿಯನ್ನು ಆಧರಿಸಿ ಮಾಡಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಚಿತ್ರ ನಿರ್ಮಾಪಕರು, ನಿರ್ದೇಶಕರ ವಿರುದ್ಧ 2011ರಲ್ಲಿ ಸಾರಾ ಅಬೂಬಕರ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಮುರಳೀಧರ ಪೈ ಬಿ. ತೀರ್ಪು ನೀಡಿದ್ದು, ಸಾರ್ವಜನಿಕವಾಗಿ ಸಿನಿಮಾವನ್ನು ಪ್ರದರ್ಶಿಸದಂತೆ ಆದೇಶಿಸಿದ್ದಾರೆ. ಕೃತಿಚೌರ್ಯಕ್ಕಾಗಿ ಲೇಖಕಿಗೆ ಎರಡು ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು. ಜೊತೆಗೆ ವಿಚಾರಣಾವಧಿಯ (ಎಂಟು ವರ್ಷ 12 ದಿನಗಳು) ಕಾಲದ ಬಡ್ಡಿಯನ್ನು, ನ್ಯಾಯಾಲಯದ ವೆಚ್ಚವನ್ನೂ ಪಾವತಿಸುವಂತೆಯೂ ನ್ಯಾಯಪೀಠ ಆದೇಶಿಸಿದೆ.