ಬೆಂಗಳೂರು,ಜೂ23(DaijiworldNews/AZM): ಇಂದು ನಟ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗಳಿಗೆ ತಮ್ಮ ಮುದ್ದು ಮಗಳ ನಾಮಕರಣದ ಸಂಭ್ರಮ.
ಹೌದು, ಇಂದು ಯಶ್ ಹಾಗೂ ರಾಧಿಕಾ ಪಂಡಿತ್ ಅವರು ತಮ್ಮ ಮುದ್ದಾದ ಮಗಳಿಗೆ ಹೆಸರನ್ನಿಟ್ಟಿದ್ದಾರೆ. ಸರಳವಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ನಲ್ಲಿ ಮಗಳ ನಾಮಕರಣ ನೇರವೇರಿದೆ. ಇಂದು ಬೆಳಗ್ಗೆ ತಾಜ್ ವೆಸ್ಟ್ ಎಂಡ್ನಲ್ಲಿ ಕುಟುಂಬದವರು ಮತ್ತು ಚಿತ್ರರಂಗದ ಆಪ್ತರೊಂದಿಗಷ್ಟೇ ನಡೆದ ನಾಮಕರಣ ಸಮಾರಂಭದಲ್ಲಿ ಪುತ್ರಿಗೆ ಆಯ್ರಾ ಎನ್ನುವ ಮುದ್ದಾದ ಹೆಸರನ್ನಿಟ್ಟು ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆ ಎಳೆದಿದ್ದಾರೆ. ಆಯ್ರಾ ಎಂದರೆ 'ಗೌರವಾನ್ವಿತ' ಎಂದು ಅರ್ಥ ಬರುತ್ತದೆ.
ಈ ಕುರಿತು ನಟ ಯಶ್ ಟ್ವಿಟರ್ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ನಾಮಕರಣದ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ. ವಿಡಿಯೋದ ಕೊನೆಯಲ್ಲಿ ಆಯ್ರಾ ವೀ ಲವ್ ಯು ಎಂದು ಹೇಳಲಾಗಿದ್ದು, ನಮ್ಮ ಪ್ರೀತಿಯ ಪುಟ್ಟ ರಾಜಕುಮಾರಿಯನ್ನು ಪರಿಚಯಿಸುತ್ತಿದ್ದೇವೆ. ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ. ಹರಸಿ ಹಾರೈಸಿ ಎಂದು ಬರೆದುಕೊಂಡಿದ್ದಾರೆ.