ಮುಂಬೈ, ಮಾ.26 (DaijiworldNews/AA): ಗಾಯಕ ಸೋನು ನಿಗಮ್ ಇತ್ತೀಚೆಗೆ ಕಾನ್ಸರ್ಟ್ವೊಂದರಲ್ಲಿ ಹಾಡುವಾಗ ಕಲ್ಲೆಸೆದಿದ್ದಾರೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ 'ನನ್ನ ಮೇಲೆ ಕಲ್ಲೆಸೆದಿಲ್ಲ' ಎಂದು ಗಾಯಕ ಸ್ಪಷ್ಟನೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಮೇಲೆ ಕಲ್ಲೆಸೆದಿದಕ್ಕೆ ಶೋವನ್ನು ಅರ್ಧಕ್ಕೆ ನಿಲ್ಲಿಸಲಾಯಿತು ಎಂಬ ಸುದ್ದಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಘಟನೆಯ ಕುರಿತಾಗಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಅವರು, ನನ್ನ ಮೇಲೆ ಕಲ್ಲುಗಳು ಮತ್ತು ಬಾಟಲಿಗಳನ್ನು ಎಸೆಯುವಂತಹ ಯಾವುದೇ ಘಟನೆ ನಡೆದಿಲ್ಲ. ವೇದಿಕೆಯ ಮೇಲೆ ಯಾರೋ ನನ್ನ ಸಹೋದ್ಯೋಗಿ ಸಭಾಂಕರ್ ಎದೆಗೆ ಎಲೆಕ್ಟ್ರಾನಿಕ್ ಸಿಗರೇಟ್ ಅನ್ನು ಎಸೆದಿದ್ದಾರೆ. ಹೀಗಾಗಿ ಈ ವಿಚಾರವನ್ನು ನನಗೆ ತಿಳಿಸಲಾಯಿತು. ಶೋ ನಿಲ್ಲಿಸೋದಾಗಿ ನನ್ನ ಸಹೋದ್ಯೋಗಿಗೆ ಮೊದಲೇ ತಿಳಿಸಿದ್ದೆ. ಆಗ ವೇದಿಕೆ ಮೇಲೆ ಎಸೆದಿದ್ದು 'ಪೂಕಿ ಬ್ಯಾಂಡ್' ಆಗಿತ್ತು ಎಂದು ಗಾಯಕ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನನ್ನ ಮೇಲೆ ಕಲ್ಲು ಎಸೆದಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಸೋನು ನಿಗಮ್ ಪುಣೆಯಲ್ಲಿ ಕಾರ್ಯಕ್ರಮ ನೀಡುತ್ತಿದ್ದ ವೇಳೆ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರು. ನೋವಿದ್ದರೂ ಕೂಡ ಶೋ ಮುಗಿಸಿ ಆ ನಂತರ ಆಸ್ಪತ್ರೆಗೆ ಅವರು ದಾಖಲಾಗಿ ಚಿಕಿತ್ಸೆ ಪಡೆದಿದ್ದರು.