ಬೆಂಗಳೂರು, ಜೂ 14 (Daijiworld News/MSP): ಬಹುಕಾಲದ ನಂತರ ಕನ್ನಡ ಹಿರಿಯ ನಟ ಅನಂತ್ ನಾಗ್ -ಸುಹಾಸಿನಿ ಜೋಡಿ ಒಟ್ಟಿಗೆ ನಟಿಸಿರುವ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ನಿರ್ದೇಶಿಸಿರುವ, ಬಹುನಿರೀಕ್ಷಿತ "ಯಾನ" ಕನ್ನಡ ಚಿತ್ರ ಜುಲೈ 12 ರ ಶುಕ್ರವಾರದಂದು ಕರ್ನಾಟಕ ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ.
ವಿಭಿನ್ನ, ವಿಶೇಷ ಕಥಾ ಹಂದರವನ್ನು ಹೊಂದಿರುವ ಈ ಸಿನೆಮಾವನ್ನು ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಹಾಗು 'ಐ' ಎಂಟರ್ಟೈನ್ಮೆಂಟ್'ನ ವಿಜಯಲಕ್ಷಿ ಸಿಂಗ್ ನಿರ್ಮಿಸಿದ್ದು, ಸಿನೆಮಾ ಬಿಡುಗಡೆಗೂ ಮುನ್ನ ಸಿನೆಮಾ ಬಗ್ಗೆ ಸಿನಿ ರಸಿಕರಲ್ಲಿ ಕುತೂಹಲ ಮೂಡಿದೆ.
ಚಿತ್ರದ ಕಥೆ ವಿಭಿನ್ನವಾಗಿದೆ. ಇಂದಿನ ಯುವಪೀಳಿಗೆಯನ್ನು ಕೇಂದ್ರೀಕರಿಸಿ ನಿರ್ಮಿಸಲಾಗಿದ್ದು, ಯುವಕ-ಯುವತಿಯರಿಗೆ ಸಿನೆಮಾ ಮೆಚ್ಚಿಗೆಯಾಗಲಿದೆ. ನಟ ಜೈಜಗದೀಶ್ ಹಾಗು ಅವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ತಮ್ಮ ಮೂವರು ಹೆಣ್ಣು ಮಕ್ಕಳಾದ ವೈಭವಿ, ವೈನಿಧಿ ಮತ್ತು ವೈಸಿರಿಯನ್ನು 'ಯಾನ' ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಪರಿಚಯಿಸಿದ್ದು, ಅವರ ಅಭಿನಯಕ್ಕೆ ಜನ ಫಿದಾ ಆಗುವುದು ಖಂಡಿತ.
ಸಿನೆಮಾವನ್ನು ಚಿತ್ರದುರ್ಗ, ದಾವಣಗೆರೆ, ಮೂಡಿಗೆರೆ, ಗೋವಾ, ಉತ್ತರಕರ್ನಾಟಕದ ಯಾನ ಸೇರಿದಂತೆ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ವೈಭವಿ, ವೈನಿಧಿ ಹಾಗೂ ವೈಸಿರಿ ನಾಯಕಿಯರಾಗಿ ನಟಿಸಿದ್ದು, ಇವರಿಗೆ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಒಂದು ಕಾಲದ ಹಾಟ್ ಫೇವರಿಟ್ ಜೋಡಿ ಅನಂತ್ ನಾಗ್ ಮತ್ತು ಸುಹಾಸಿನಿ ಈ ಸಿನೆಮಾದಲ್ಲಿ ಒಂದಾಗಿರುವುದು ಸಿನೆಮಾಕ್ಕೆ ಮತ್ತೊಂದು ಹೆಗ್ಗಳಿಕೆಯಾಗಿದೆ.