ಮುಂಬೈ, ಫೆ.24 (DaijiworldNews/AA): ಖ್ಯಾತ ಗಾಯಕ ಉದಿತ್ ನಾರಾಯಣ್ ವಿರುದ್ಧ ಅವರ ಮೊದಲ ಪತ್ನಿ ರಂಜನಾ ಝಾ ಅವರು ಜೀವನಾಂಶ ಪ್ರಕರಣವನ್ನು ದಾಖಲಿಸಿದ್ದಾರೆ.

ಉದಿತ್ ನಾರಾಯಣ್ ತಮ್ಮ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಅವರ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ರಂಜನಾ ಆರೋಪಿಸಿದ್ದಾರೆ. ಫೆ. 21ರಂದು ಉದಿತ್ ನಾರಾಯಣ್ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಅವರು ತಮ್ಮ ನಿರ್ಧಾರದಲ್ಲಿ ದೃಢವಾಗಿ ನಿಂತಿದ್ದು, ಯಾವುದೇ ಇತ್ಯರ್ಥಕ್ಕೆ ಸಿದ್ಧರಿಲ್ಲ ಎಂದಿದ್ದಾರೆ.
ರಂಜನಾ ಅವರು ನನ್ನಿಂದ ಹಣವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಉದಿತ್ ನಾರಾಯಣ್ ಅವರು ಕೋರ್ಟ್ನಲ್ಲಿ ತಿಳಿಸಿದ್ದಾರೆ. ಈ ಮೊದಲು ಬಿಹಾರದ ಮಹಿಳಾ ಕಮಿಷನ್ನಲ್ಲಿ ಪ್ರಕರಣ ದಾಖಲಾಗಿದ್ದ ಸಂದರ್ಭದಲ್ಲಿ ಇತ್ಯರ್ಥ ಆಗಿತ್ತು.
ಈ ಮೊದಲು ರಂಜನಾ ಅವರಿಗೆ ಉದಿತ್ ತಿಂಗಳಿಗೆ 15 ಸಾವಿರ ರೂಪಾಯಿ ನೀಡುತ್ತಿದ್ದರು. ೨೦೨೧ರಲ್ಲಿ ಅದನ್ನು 25 ಸಾವಿರ ರೂಪಾಯಿಗೆ ಏರಿಕೆ ಮಾಡಲಾಯಿತು. ಇಷ್ಟೇ ಅಲ್ಲದೆ, 1 ಕೋಟಿ ರೂಪಾಯಿ ಮೌಲ್ಯದ ಭೂಮಿ ಹಾಗೂ ಮನೆಯನ್ನು ಉದಿತ್ ರಂಜನಾಗೆ ನೀಡಿದ್ದರು. 25 ಲಕ್ಷ ಬೆಲೆಯ ಜ್ಯುವೆಲರಿಗಳನ್ನು ಕೂಡ ನೀಡಲಾಗಿತ್ತು. ಇದನ್ನು ರಂಜನಾ ಮಾರಿಕೊಂಡಿದ್ದರು ಎಂದು ಹೇಳಲಾಗಿದೆ.
ನನಗೆ ವಯಸ್ಸಾಗುತ್ತಾ ಬಂದಂತೆ ಆರೋಗ್ಯ ಹದಗೆಡುತ್ತಾ ಹೋಗಿದೆ. ಹೀಗಾಗಿ, ಉದಿತ್ ಜೊತೆ ಇರಬೇಕೆನ್ನುವುದು ನಿಜವಾದ ಆಸೆ ಹುಟ್ಟಿಕೊಂಡಿದೆ. ನನಗೆ ಅವರ ಜೊತೆ ಕಳೆಯಬೇಕು ಎನ್ನುವ ಆಸೆ ಹುಟ್ಟಿಕೊಂಡಿದೆ. ಉದಿತ್ ಅವರು ನನ್ನನ್ನು ನಿರ್ಲಕ್ಷಿಸಿದ್ದಾರೆ. ಜಮೀನು ಮಾರಾಟದಿಂದ ಬಂದ ಹಣದಲ್ಲಿ 18 ಲಕ್ಷ ರೂಪಾಯಿಗಳನ್ನು ಇಟ್ಟುಕೊಂಡಿದ್ದಾರೆ. ನಾನು ಮುಂಬೈಗೆ ಬಂದಾಗಲೆಲ್ಲಾ ಬೆದರಿಕೆಗಳನ್ನು ಎದುರಿಸುತ್ತಿದ್ದೇನೆ' ಎಂದು ರಂಜನಾ ಅವರು ಆರೋಪಿಸಿದ್ದಾರೆ.