ಮುಂಬೈ, ಜೂ13(Daijiworld News/SS): ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಬಾಲ್ಯದ ಜೀವನಕ್ಕೆ ಸಂಬಂಧಿಸಿದ ತಮಾಷೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿದ್ದ ವೇಳೆ ಮಾತನಾಡಿದ ಅವರು, ಆಗ ನಾನು 3ನೇ ತರಗತಿ, ಲಖನೌನಲ್ಲಿದ್ದೆವು. ನಮ್ಮ ಶಾಲೆಯ ಬಳಿ ಮರವೊಂದಿತ್ತು. ಅಲ್ಲಿಗೆ ಬಹಳಷ್ಟು ಕೋತಿಗಳು ಬಂದು ಹೋಗುತ್ತಿದ್ದವು. ಆಗ ಮರದ ಮೇಲೆ ಹೆಣ್ಣು ಕೋತಿಯೊಂದು ನಿಂತು ಅದ್ಯಾಕೋ ಏನೋ ಗೊತ್ತಿಲ್ಲ, ಪರಚಿಕೊಳ್ಳುತ್ತಿತ್ತು. ಇದನ್ನು ನೋಡಿ ನನಗೆ ನಗು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಆ ಕೋತಿಯನ್ನು ನೋಡಿ ಜೋರಾಗಿ ನಕ್ಕುಬಿಟ್ಟೆ. ಅಯ್ಯೋ ಆ ಕೋತಿ ನೋಡಿ ಹೇಗೆ ಮೈಯಲ್ಲಾ ಪರಚಿಕೊಳ್ಳುತ್ತಿದೆ ಎಂದು ನಗಾಡುತ್ತಿದ್ದೆ. ಆ ವೇಳೆ ಕೋತಿ ಮರದಿಂದ ಕೆಳಗಿಳಿದು ಬಂತು. ನನ್ನನ್ನು ನೋಡಿತು. ಕೆನ್ನೆಗೆ ಒಂದು ತಪರಾಕಿ ನೀಡಿ ಮತ್ತೆ ಮರ ಹತ್ತಿ ಕುಳಿತುಕೊಂಡಿತು ಎಂದು ಹೇಳಿಕೊಂಡಿದ್ದಾರೆ.
ಈ ಘಟನೆಯನ್ನು ಹಂಚಿಕೊಂಡ ಬಳಿಕ ಅಲ್ಲೇ ಇದ್ದ ಅವರ ತಾಯಿಯ ಕಡೆಗೆ ನೋಡುತ್ತಾ, ಆ ಘಟನೆ ನೆನಪಿದಿಯಾ ಮಮ್ಮಿ, ಕೋತಿ ನನ್ನ ಕೆನ್ನೆಗೆ ಬಾರಿಸಿದ್ದು ಎಂದಿದ್ದಾರೆ.
ಪ್ರಿಯಾಂಕ ಏನೇ ಮಾಡಿದರೂ ಅದು ಟ್ರೋಲಿಗರಿಗೆ ಒಳ್ಳೆಯ ಸರಕಾಗಿ ಪರಿಣಮಿಸುತ್ತಿದೆ. ಬಾಲಿವುಡ್ಗಿಂತ ಹಾಲಿವುಡ್ನಲ್ಲೇ ಹೆಚ್ಚು ಜನಪ್ರಿಯವಾಗುತ್ತಿರುವ ನಟಿ ಪ್ರಿಯಾಂಕ ಚೋಪ್ರಾ ಏನೇ ಮಾಡಿದರೂ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಪ್ರಿಯಾಂಕ ಚೋಪ್ರಾ ತಮ್ಮ ಜೀವನದಲ್ಲಿ ನಡೆದ ಹಾಸ್ಯ ಘಟನೆಯ ಬಗ್ಗೆ ಮಾತನಾಡಿರುವುದು ಕೂಡ ವೈರಲ್ ಆಗಿದೆ.