ಮಂಗಳೂರು, ಜೂ10(Daijiworld News/SS): ಪಾಶ್ಚಾತ್ಯ ಶೈಲಿಯ (ಹುಲ್ಲಾಹೂಪ್) ನೃತ್ಯ ಪ್ರದರ್ಶನದಲ್ಲಿ ಮಂಗಳೂರಿನ 5ರ ಹರೆಯದ ಆದ್ಯಾ ಎ. ಎಂಬ ಪುಟ್ಟ ಬಾಲಕಿಯೊಬ್ಬರು ಖ್ಯಾತಿ ಪಡೆದಿದ್ದಾರೆ.
ಮಠದಕಣಿಯ ಅಶ್ವಿನ್ ಮತ್ತು ಪ್ರಿಯಾಂಕಾ ದಂಪತಿ ಪುತ್ರಿ ಆದ್ಯಾ ಹುಲ್ಲಾ ಹೂಪ್ ನೃತ್ಯ ಶೈಲಿಯಲ್ಲಿ ವಿಶ್ವದಾಖಲೆ ಮಾಡಿದ್ದಾಳೆ. ಪಾಶ್ಚಾತ್ಯ ಶೈಲಿಯ ಹುಲ್ಲಾಹೂಪನ್ನು ಸ್ಟಾರ್ ಬುಕ್ ಆಫ್ ಇಂಡಿಯಾ ಭಾರತದಲ್ಲೂ ಆಯೋಜಿಸುತ್ತಿದೆ. ಜೂನ್ ತಿಂಗಳ ಮೊದಲ ವಾರದಲ್ಲಿ ಇಂಡಿಯಾ ಸ್ಟಾರ್ ವರ್ಲ್ಡ್ ಆಯೋಜಿಸಿದ ಸ್ಪರ್ಧೆಯಲ್ಲಿ ಈಕೆ ದಾಖಲೆ ಮಾಡಿದ್ದಾಳೆ. ರಿಂಗನ್ನು ಸೊಂಟಕ್ಕೆ ಹಾಕಿ ಅದನ್ನು ಸಂಗೀತಕ್ಕೆ ಅಲುಗಾಡಿಸುವುದೇ ಈ ನೃತ್ಯದ ವಿಶೇಷತೆ. ಸತತ 34 ನಿಮಿಷ 25 ಸೆಕೆಂಡ್ಗಳ ಕಾಲ 4000 ಬಾರಿ ರಿಂಗನ್ನು ಈಕೆ ಸೊಂಟದ ಸುತ್ತ ತಿರುಗಿಸಿದ್ದಾಳೆ.
ಈಕೆ ಹಾಡುಗಾರಿಕೆ, ಸಿನೆಮಾ, ಸ್ಕೇಟಿಂಗ್ನಲ್ಲೂ ಸೈ ಅನ್ನಿಸಿಕೊಂಡವಳು. ಎರಡೂವರೆ ವರ್ಷದಿಂದಲೇ ವಿಶೇಷ ಪ್ರತಿಭೆ ಕಂಡ ಈಕೆಯನ್ನು ಪೋಷಕರು ಬೆಂಬಲಿಸಿದರು. ಶಾಲೆಯಲ್ಲೇ ಈಕೆ ನೃತ್ಯಾಭ್ಯಾಸ ಆರಂಭಿಸಿದಳು.
ಏಪ್ರಿಲ್ 6ರಂದು ನಗರದ ಯೆಯ್ಯಾಡಿಯ ಪ್ರಿಯದರ್ಶಿನಿ ಮೊಂಟೆಸರಿಯಲ್ಲಿ ಈಕೆಯ ಪ್ರದರ್ಶನ ನಡೆದಿದ್ದು, ಈಕೆಯ ನೃತ್ಯವನ್ನು ಕಂಡ ವೀಕ್ಷಕರು ರೋಮಾಂಚನಗೊಂಡಿದ್ದರು. ಪ್ರಸ್ತುತ ಗುರು ಚಂದ್ರಶೇಖರ್ ಅವರ ಬಳಿ ನೃತ್ಯಾಭ್ಯಾಸ ಕಲಿಯುತ್ತಿದ್ದಾಳೆ.