ಮಂಗಳೂರು, ಜೂ 6 (Daijiworld News/MSP): ರಶಾಂಕ್ ಪ್ರೊಡಕ್ಷನ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ‘ರೋಹಿತಾಶ್ವಿನ್’ ಕನ್ನಡ ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಅಕ್ಟೋಬರ್ನಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ ಎಂದು ನಿರ್ದೇಶಕ ಜೋಸೆಫ್ ನೀನಾಸಂ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಿನಿಮಾದ ಕಥೆ ಮಂಗಳೂರಿಗೆ ಸಂಬಂಧಿಸಿದ್ದಾದ್ದರಿಂದ ಹೆಚ್ಚಿನ ಚಿತ್ರೀಕರಣ ಮಂಗಳೂರಿನ ಆಸುಪಾಸಿನಲ್ಲಿ ಮತ್ತು ಬೆಂಗಳೂರಿನಲ್ಲಿ ಮಾಡಲಾಗಿದೆ. ಇದು ಜೀವನವೇ ಬೇಡವೆಂದುಕೊಂಡಿರುವ ಒಬ್ಬ ಮತ್ತೆ ಜೀವನವನ್ನು ಪ್ರೀತಿಸಲು ಪ್ರಾರಂಭಿಸುವ ಕಥೆ. ಶ್ರೀಕಾಂತ್ ರೈ ನಾಯಕನಾಗಿ, ತನುಜಾ ಪವಾರ್ ನಾಯಕಿಯಾಗಿ, ಅನೂಪ್ ಶೂನ್ಯ ಮುಖ್ಯ ತಾರಾಗಣದಲ್ಲಿದ್ದಾರೆ. ಸಿಜೊ ಕೆ. ಜೋಸ್ ಅವರ ಛಾಯಾಗ್ರಹಣವಿದೆ. ಸಂಗೀತ ನಿರ್ದೇಶನ ಮಿಥುನ್ ಎಂ. ಆರ್ ಅವರದು. ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿರುವ ಪತ್ರಕರ್ತ ಹೊನ್ನಾಳಿ ಚಂದ್ರು, ಡಾ. ಎಚ್. ವಿ. ವೇಣುಗೋಪಾಲ್ ಅವರೊಂದಿಗೆ ಸಾಹಿತ್ಯವನ್ನೂ ಬರೆದಿದ್ದಾರೆ" ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಶಮಾಂತ್ ಶೆಟ್ಟಿ ಕಟೀಲ್, ಶ್ರೀಕಾಂತ್ ರೈ, ತನುಜಾ ಪವಾರ್ ಸಿಜೊ ಕೆ. ಜೋಸ್ ಉಪಸ್ಥಿತರಿದ್ದರು.