ಚೆನ್ನೈ, ಅ.24(DaijiworldNews/AK): ಕಾಲಿವುಡ್ ನಟ ಸೂರ್ಯ ಅವರು ಚಿತ್ರರಂಗದಲ್ಲಿ ತಮ್ಮದೇ ಹೆಸರು ಪಡೆದಿದ್ದಾರೆ. ಅದೇಷ್ಟೋ ಜನ ಸೂರ್ಯ ನಟನೆಗೆ ಫೀದಾ ಆಗಿದ್ದಾರೆ. ಅನೇಕ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ.
‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದ ಸೂರ್ಯ ಅವರಿಗೆ ನಟನಾಗಬೇಕು ಎಂಬ ಆಸೆಯೇ ಇರಲಿಲ್ಲ .. ಅವರು ನಟನಾಗಿದ್ದು ಆಕಸ್ಮಿಕವಾಗಿ. ಅದು ಕೂಡ ತಾಯಿಯ ಸಾಲ ತೀರಿಸುವ ಸಲುವಾಗಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು ಅಂತೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೂರ್ಯ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನಟನಾಗುವುದಕ್ಕೂ ಮುನ್ನ ಸೂರ್ಯ ಅವರು ಗಾರ್ಮೆಂಟ್ಸ್ ಕಂಪನಿಯಲ್ಲಿ ತರಬೇತಿ ಪಡೆಯುತ್ತಾ, ಕೆಲಸ ಮಾಡುತ್ತಿದ್ದರು. 15 ದಿನಕ್ಕೆ ಅವರಿಗೆ 750 ರೂಪಾಯಿ ಸಂಪಾದನೆ ಆಗುತ್ತಿತ್ತು. ಅಲ್ಲೇ ಕೆಲಸ ಮುಂದುವರಿಸಿದ್ದರೆ ಮೂರು ವರ್ಷದ ಬಳಿಕ ಅವರಿಗೆ ಪ್ರತಿ ತಿಂಗಳು 8 ಸಾವಿರ ರೂಪಾಯಿ ಸಂಬಳ ಸಿಗುತ್ತಿತ್ತು. ಮುಂದೊಂದು ದಿನ ತಮ್ಮದೇ ಸ್ವಂತ ಕಂಪನಿ ಶುರು ಮಾಡಬೇಕು ಎಂಬುದು ಯೋಜನೆಯಾಗಿತ್ತು.
ಸೂರ್ಯ ಅವರ ತಂದೆ ಶಿವಕುಮಾರ್ ಅವರಿಗೆ ತಿಳಿಯದಂತೆಯೇ ತಾಯಿ ಲಕ್ಷ್ಮಿ ಅವರು 25 ಸಾವಿರ ರೂಪಾಯಿ ಸಾಲ ತೆಗೆದುಕೊಂಡಿದ್ದರು. ಆ ಸಾಲವನ್ನು ತೀರಿಸಬೇಕು ಎಂಬ ಉದ್ದೇಶದೊಂದಿಗೆ ಸೂರ್ಯ ಅವರು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡರು. 1997ರಲ್ಲಿ ಬಿಡುಗಡೆಯಾದ ‘ನೇರುಕ್ಕು ನೇರ್’ ಸಿನಿಮಾದಲ್ಲಿ ಅವರು ಮೊದಲ ಬಾರಿಗೆ ನಟಿಸಿದರು.
ಚಿತ್ರರಂಗಕ್ಕೆ ಬರುತ್ತೇನೆ ಎಂದು ನಾನು ಯಾವತ್ತೂ ಆಲೋಚಿಸಿರಲಿಲ್ಲ. ಕ್ಯಾಮೆರಾ ಎದುರು ನಿಲ್ಲಬೇಕು , ನಟನಾಗಬೇಕು ಎಂಬ ಆಸೆಯೇ ನನಗೆ ಇರಲಿಲ್ಲ. ಅಮ್ಮನಿಗೆ 25 ಸಾವಿರ ರೂಪಾಯಿ ನೀಡಿ, ನಿಮ್ಮ ಸಾಲ ತೀರಿತು, ನೀವಿನ್ನು ಚಿಂತೆ ಮಾಡುವುದು ಬೇಡ ಅಂತ ಹೇಳಬೇಕು ಎಂಬ ಕಾರಣದಿಂದ ನಾನು ಚಿತ್ರರಂಗಕ್ಕೆ ಬಂದೆ. ಹೀಗೆ ನಾನು ನಟನಾ ವೃತ್ತಿ ಶುರು ಮಾಡಿದೆ’ ಎಂದು ಸೂರ್ಯ ಹೇಳಿದ್ದಾರೆ.