ಪೆರುಗ್ವೆ, ಅ.16(DaijiworldNews/AA): ಬಾಲಿವುಡ್ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಪತಿ, ಹಾಲಿವುಡ್ ನ ಜನಪ್ರಿಯ ಪಾಪ್ ಗಾಯಕ ನಿಕ್ ಜೋನಸ್ ಅವರು ವೇದಿಕೆ ಮೇಲೆ ಪ್ರದರ್ಶನ ನೀಡುವ ಸಂದರ್ಭದಲ್ಲಿ ಒಮ್ಮಿಂದೊಮ್ಮೆಲೆ ಸ್ಟೇಜ್ ಬಿಟ್ಟು ಓಡಿ ಹೋಗಿದ್ದಾರೆ.
ನಿಕ್ ಜೋನಸ್ ಹಾಗೂ ಅವರ ಸಹೋದರರು ಸೇರಿ ಜೋನಸ್ ಬ್ರದರ್ಸ್ ಕಾನ್ಸರ್ಟ್ ಗಳನ್ನು ನಡೆಸುತ್ತಾರೆ. ಈ ಕಾನ್ಸರ್ಟ್ ಗಳಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಇತ್ತೀಚೆಗೆ ಪೆರುಗ್ವೆನಲ್ಲಿ ನಿಕ್ ಸಹೋದರರು ಲೈವ್ ಕಾನ್ಸರ್ಟ್ ನಡೆಸುತ್ತಿದ್ದರು. ವೇದಿಕೆ ಮೇಲೆ ನಿಕ್ ಜೋನಸ್, ಜೋ ಜೋನಸ್, ಕೆವಿನ್ ಜೋನಸ್ ಮೂವರೂ ಸಹ ಪ್ರದರ್ಶನ ನೀಡುತ್ತಿದ್ದರು. ಈ ಕಾನ್ಸರ್ಟ್ಗೆ ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ನಿಕ್ ತಮ್ಮ ಹಿಂದೆ ಗ್ಯಾಲರಿಯಲ್ಲಿ ನಿಂತಿದ್ದ ಜನರನ್ನು ನೋಡುತ್ತಲೇ ವೇದಿಕೆ ಇಳಿದು ತನ್ನ ಭದ್ರತೆಯವರಿಗೆ ಕೈ ಸಂಜ್ಞೆ ಮಾಡುತ್ತಾ ವೇದಿಕೆಯಿಂದ ಇಳಿದು ಓಡಿ ಹೋಗಿದ್ದಾರೆ. ಈ ದೃಶ್ಯವನ್ನು ಕಂಡು ನೆರದಿದ್ದ ಪ್ರೇಕ್ಷಕರು ಒಮ್ಮೆಗೆ ಆಶ್ಚರ್ಯಗೊಂಡಿದ್ದರು.
ಆದರೆ ನಿಜವಾಗಿ ನಡೆದಿದ್ದೇನೆಂದರೆ ನಿಕ್ ಅವರ ಮೇಲೆ ಯಾರೋ ಲೇಸರ್ ಬೆಳಕು ಬಿಟ್ಟಿದ್ದಾರೆ. ಲೇಸರ್ ನಿಂದ ನಿಕ್ ಅವರ ಮೇಲೆ ಬಿಟ್ಟ ಕೆಂಪು ಬಣ್ಣದ ಆ ಬೆಳಕು ರೈಫರ್ ಬಂದೂಕುಗಳಲ್ಲಿಯೂ ಬಳಲಸಾಗುತ್ತದೆ. ಅಲ್ಲದೆ ಕೆಂಪು ಬಣ್ಣದ ಬೆಳಕನ್ನು ಅಪಾಯದ ಸೂಚಕವಾಗಿಯೂ ಬಳಸಲಾಗುತ್ತದೆ. ಈ ಕಾರಣಕ್ಕೆ ನಿಕ್ ಜೋನಸ್ ತಮ್ಮ ಮೇಲೆ ಕೆಂಪು ಲೇಸರ್ ಬೀಳುತ್ತಿದ್ದಂತೆ ಸ್ಟೇಜ್ ಬಿಟ್ಟು ಓಡಿ ಹೋಗಿದ್ದಾರೆ. ಇನ್ನು ಅವರ ಭದ್ರತೆಯವರು ಕೂಡಲೇ ಲೇಸರ್ ಬಿಡುತ್ತಿದ್ದ ವ್ಯಕ್ತಿಯನ್ನು ಕಂಡು ಹಿಡಿದು ಆತನನ್ನು ಕಾನ್ಸರ್ಟ್ ನಿಂದ ಹೊರಗೆ ಕಳುಹಿಸಿದ್ದಾರೆ.