ಚೆನ್ನೈ, ಅ.08(DaijiworldNews/AA): ರಜನೀಕಾಂತ್ ಪುತ್ರಿ ಐಶ್ವರ್ಯಾ ಮತ್ತು ನಟ ಧನುಶ್ ಅವರು ವಿಚ್ಛೇದನ ಘೋಷಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಇವರಿಬ್ಬರು ತಮ್ಮ ವಿಚ್ಛೇದನ ನಿರ್ಣಯವನ್ನು ಹಿಂಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
2022 ರಲ್ಲಿ ಧನುಶ್ ಹಾಗೂ ಐಶ್ವರ್ಯಾ ಪರಸ್ಪರ ದೂರಾಗುತ್ತಿರುವುದಾಗಿ ಘೋಷಿಸಿದ್ದರು. ಬಳಿಕ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ ಈ ಜೋಡಿ ಕೆಲ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಧನುಶ್ ಹಾಗೂ ಐಶ್ವರ್ಯಾರ ವಿಚ್ಛೇದನದ ಅರ್ಜಿ ಇನ್ನೂ ವಿಲೇವಾರಿ ಆಗಿಲ್ಲ. ಇಂದು ವಿಚ್ಛೇದನದ ಅರ್ಜಿಯ ವಿಚಾರಣೆ ಇತ್ತು, ಆದರೆ ಇಬ್ಬರೂ ಕೂಡ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ನ್ಯಾಯಾಧೀಶರು ವಿಚಾರಣೆಯನ್ನು ಅಕ್ಟೋಬರ್ 19ಕ್ಕೆ ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ.
ಕೆಲವು ತಿಂಗಳ ಹಿಂದಷ್ಟೆ ಧನುಶ್ ಹಾಗೂ ಐಶ್ವರ್ಯಾ ಮತ್ತೆ ಒಂದಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಈ ಜೋಡಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಈ ಸುದ್ದಿಗಳಿಗೆ ಪುಷ್ಠಿ ನೀಡಿದ್ದಾರೆ.