ಮಂಗಳೂರು,ಮೇ 31(Daijiworld News/MSP): ಕೋಸ್ಟಲ್ ವುಡ್ ನ ಸ್ಟಾರ್ ನಟ ರೂಪೇಶ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ‘ಗಿರಿಗಿಟ್’ ಸಿನಿಮಾದ ಕೆಲಸಗಳಿಗೆ ಚುರುಕುಮುಟ್ಟಿದ್ದು ಬಾಕಿ ಉಳಿದ ಅಲ್ಪಸ್ವಲ್ಪ ಡಬ್ಬಿಂಗ್ ಕೆಲಸವನ್ನು ಮುಗಿಸಿಕೊಳ್ಳುವತ್ತ ಚಿತ್ರತಂಡ ಬ್ಯುಸಿಯಾಗಿದೆ.
ಕೋಸ್ಟಲ್ ವುಡ್ ನ ಬಹುತೇಕ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿರುವುದರಿಂದ ಸಿನಿಪ್ರಿಯರಿಗೆ ‘ಗಿರಿಗಿಟ್’ ಬಗ್ಗೆ ನಿರೀಕ್ಷೆ ತುಸು ಹೆಚ್ಚೇ ಇದೆ. ಚಿತ್ರತಂಡದ ಲೆಕ್ಕಚಾರದಂತೆ ಸಿನಿಮಾ ಆಗಸ್ಟ್ ವೇಳೆಗೆ ತೆರೆಗೆ ಬರಬಹುದು.
‘ಗಿರಿಗಿಟ್’ ಸಿನಿಮಾದಲ್ಲಿ ಅಭಿನಯಿಸಿದ ಅರವಿಂದ ಬೋಳಾರ್ ಮತ್ತು ಕಾಪು ಪ್ರಶಂಸ ತಂಡದ ಬಲೆ ತೆಲಿಪಾಲೆ ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಅವರ ಡೈಲಾಗ್ ಸಾಕಷ್ಟು ವೈರಲ್ ಆಗಿತ್ತು. ‘ಅಯ್ಯೋ... ದೇವಾ..’ ಎನ್ನುವ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿತ್ತು.
‘ಗಿರಿಗಿಟ್’ ಸಿನಿಮಾದಲ್ಲಿ ನವೀನ್ ಡಿ. ಪಡೀಲ್ ಈ ಸಿನೆಮಾದಲ್ಲಿ ಮಿಲಿಟ್ರಿ ಆಫೀಸರ್ ಗೆಟಪ್ನಲ್ಲಿ ಕಾಣಿಸಿಕೊಂಡರೆ ಅರವಿಂದ ಬೋಳಾರ್ ವಕೀಲ ಪಾತ್ರಕ್ಕೆ ಜೀವತುಂಬಲಿದ್ದಾರೆ.
ಸಂಪೂರ್ಣ ಹಾಸ್ಯ ಪ್ರಧಾನ ಚಿತ್ರ ಗಿರಿಗಿಟ್ ಯುವ ಸಮುದಾಯವನ್ನು ಸೆಳೆಯುವ ಕಥೆಯನ್ನು ಹೊಂದಿದೆಯಂತೆ. ಧಾರಾವಾಹಿ ನಟಿ ಶಿಲ್ಪಾ ಶೆಟ್ಟಿ ಅವರು ಈ ಚಿತ್ರದಲ್ಲಿ ರೂಪೇಶ್ ಗೆ ನಾಯಕಿ. ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ರೂಪೇಶ್ ಶೆಟ್ಟಿಯದ್ದೇ ಆಗಿದೆ. ಉಳಿದಂತೆ ಚಿತ್ರದಲ್ಲಿ ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮುಂತಾದ ಕಲಾವಿದರಿದ್ದಾರೆ.