ಮುಂಬೈ, ಸೆ.21(DaijiworldNews/AA): ಪದೇ ಪದೇ ಪ್ರತಿಭಟನೆ ಹಾಡು ಎಂದು ಕೂಗುತ್ತಿದ್ದ ಅಭಿಮಾನಿಯ ವಿರುದ್ಧ ಅರಿಜಿತ್ ಸಿಂಗ್ ಅವರು ಬಹಿರಂಗವಾಗಿಯೇ ತಮ್ಮ ಸಿಟ್ಟನ್ನು ಹೊರಹಾಕಿದ್ದು, ಪ್ರತಿಭಟನೆ ಮಾಡೋದಾದರೆ ಕೋಲ್ಕತ್ತಕ್ಕೆ ಹೋಗು ಎಂದು ತಿಳಿಸಿದ್ದಾರೆ.
ಅರಿಜಿತ್ ಸಿಂಗ್ ಅವರು ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಕಾರ್ಯಕ್ರಮ ನೀಡಿದ್ದರು. ಅರಿಜಿತ್ ಸಿಂಗ್ ಅವರು 1999ರ 'ರಮ್ತಾ ಜೋಗಿ..' ಹಾಡನ್ನು ಹಾಡುತ್ತಿದ್ದರು. ಈ ವೇಳೆ ಅಭಿಮಾನಿಯೋರ್ವ ಅರಿಜಿತ್ ಅವರೇ ಬರೆದ 'ಪ್ರೊಟೆಸ್ಟ್?..' (ಪ್ರತಿಭಟನೆ) ಸಾಂಗ್ ನ ಹಾಡೋಕೆ ಕೇಳಿದ್ದಾನೆ. ಕೋಲ್ಕತ್ತಾದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಈ ಹಾಡನ್ನು ಅವರು ಹಾಡಬೇಕು ಎಂಬುದು ಅಭಿಮಾನಿಯ ಕೋರಿಕೆಯಾಗಿತ್ತು.
ಆದರೆ, ಅರಿಜಿತ್ ಇದನ್ನು ಒಪ್ಪಿಲ್ಲ. ಅವರು ನೋಡುವಷ್ಟು ನೋಡಿ ಆ ಬಳಿಕ ಸಿಟ್ಟು ಹೊರಹಾಕಿದ್ದಾರೆ. ಇದು ಅದಕ್ಕೆ ಜಾಗ ಅಲ್ಲ. ಪ್ರತಿಭಟನೆಯ ಸಾಂಗ್ ಕೇಳಲು ಜನ ಇಲ್ಲಿಗೆ ಬಂದಿಲ್ಲ. ಅವರು ನನ್ನ ಹಾಡನ್ನು ಕೇಳಲು ಬಂದಿದ್ದಾರೆ. ಅದು ನನ್ನ ಕೆಲಸ ಅಲ್ಲವೇ? ಈಗ ಬೇಡ. ನಿನಗೆ ನಿಜಕ್ಕೂ ನೋವಾಗುತ್ತಿದ್ದರೆ ಕೋಲ್ಕತ್ತಕ್ಕೆ ಹೋಗು. ಅಲ್ಲಿ ಕೆಲವರನ್ನು ಸೇರಿಸು. ಅನೇಕ ಬೆಂಗಾಲಿ ಜನರು ಇಲ್ಲಿದ್ದಾರೆ. ರಸ್ತೆಗೆ ಇಳಿದು ಪ್ರತಿಭಟನೆ ಮಾಡು ಎಂದು ಹೇಳಿದ್ದಾರೆ.