ಮುಂಬೈ, ಸೆ.19 (DaijiworldNews/TA):‘ಎಮರ್ಜೆನ್ಸಿ’ ಸಿನಿಮಾದ ಬಿಡುಗಡೆ ಬಗ್ಗೆ ಚಿಂತೆಗೆ ಒಳಗಾಗಿದ್ದ ಕಂಗನಾ ರನೌತ್ ಗೆ ಕೊಂಚ ನಿರಾಳತೆ ದೊರೆತಿದೆ. ಕೊನೆಗೂ ಬಾಂಬೆ ಹೈಕೋರ್ಟ್ ಆದೇಶದಿಂದ ನಿರಾಳರಾಗಿದ್ದಾರೆ. ವಾರದ ಒಳಗಾಗಿ ತೀರ್ಮಾನ ತೆಗೆದುಕೊಳ್ಳುವಂತೆ ಸಿಬಿಎಫ್ಸಿಗೆ ಕೋರ್ಟ್ ಸೂಚಿಸಿದೆ.
ಕಂಗನಾ ರಣಾವತ್ ಅಭಿನಯದ ‘ಎಮರ್ಜೆನ್ಸಿಗೆ ಪ್ರಮಾಣಪತ್ರ ಬಿಡುಗಡೆ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಾಂಬೆ ಹೈಕೋರ್ಟ್, ಸೆಪ್ಟೆಂಬರ್ 25 ರೊಳಗೆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮತ್ತು ಅದನ್ನು ತಿಳಿಸುವಂತೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಯ ಪರಿಷ್ಕರಣೆ ಸಮಿತಿಗೆ ಗುರುವಾರ ನಿರ್ದೇಶನ ನೀಡಿದೆ.
ಕಂಗನಾ ರಣಾವತ್ ‘ಎಮರ್ಜೆನ್ಸಿಗೆ ನೀಡಲಾದ ಪ್ರಮಾಣಪತ್ರವನ್ನು ಅಕ್ರಮವಾಗಿ ಮತ್ತು ಅನಿಯಂತ್ರಿತವಾಗಿ ತಡೆಹಿಡಿಯಲಾಗಿದೆ ಎಂದು ಆರೋಪಿಸಿ ಸಿಬಿಎಫ್ಸಿ ವಿರುದ್ಧ ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿಗಳಾದ ಬಿ ಪಿ ಕೊಲಬಾವಲ್ಲ ಮತ್ತು ಫಿರ್ದೋಶ್ ಪಿ ಪೂನಿವಾಲಾ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸುತ್ತಿದೆ.
ಪ್ರಮಾಣಪತ್ರವನ್ನು ಬಿಡುಗಡೆ ಮಾಡುವ ವಿಳಂಬವನ್ನು ನಿಲ್ಲಿಸಬೇಕು ಏಕೆಂದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸೃಜನಶೀಲ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ ಮತ್ತು ಚಲನಚಿತ್ರವನ್ನು ಬಿಡುಗಡೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ನಿರ್ಮಾಪಕರ ಮೇಲೆ 'ದೊಡ್ಡ' ಆರ್ಥಿಕ ಹೊರೆ ಉಂಟಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.