ಬಂಟ್ವಾಳ, ಸೆ.13(DaijiworldNews/AA): ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದು ಇಂದು ರಾಜ್ಯಾದ್ಯಂತ ತೆರೆಕಂಡಿರುವ ಕನ್ನಡ ಚಲನಚಿತ್ರ ಕಲ್ಜಿಗ ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್ ಹೇಳಿದರು.
ಅವರು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ಅವರು, ಮನಸ್ಸಿಗೆ ಹಗುರವಾಗುವ ಭಾವನೆಯನ್ನು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ನೀಡುತ್ತದೆ. ಒಮ್ಮೆ ಬಂದಲ್ಲಿ ಇಲ್ಲಿಂದ ಹೋಗುವ ಮನಸ್ಸಾಗುವುದಿಲ್ಲ. ಮನಸ್ಸಲ್ಲಿ ಏನೇ ಬೇಸರವಿದ್ದರೂ ಇಲ್ಲಿಗೆ ಬಂದಾಗ ಅದನ್ನು ಕಳೆಯುತ್ತೇವೆ ಎಂದರು.
ಚಿತ್ರದ ಪ್ರೀಮಿಯರ್ ಷೋ ವೀಕ್ಷಿಸಿರುವ ಪ್ರೇಕ್ಷಕರು ವಿಶಿಷ್ಟವಾದ ಪ್ರೀತಿಯನ್ನು ನೀಡುತ್ತಿದ್ದಾರೆ. ಚಲನಚಿತ್ರ ತಂಡದ ಮೇಲೆ ಅಜ್ಜನ ಆಶಿರ್ವಾದ ಇದೆ ಅನ್ನುವುದು ಚಿತ್ರದ ಶೂಟಿಂಗ್ ನಿಂದ ಹಿಡಿದು ಈವರೆಗೆ ನಡೆದ ಸನ್ನಿವೇಶಗಳೆಲ್ಲವೂ ತೋರಿಸಿಕೊಟ್ಟಿದೆ ಎಂದು ತಿಳಿಸಿದರು.
ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ ಹೊರತಾಗಿ ಅಜ್ಜನ ಕುರಿತು ಅಪಪ್ರಚಾರ ಮಾಡುವ ಯಾವುದೇ ಕಾರ್ಯಕ್ಕೆ ಮುಂದಾಗಿಲ್ಲ. ಕಲ್ಜಿಗ ಚಿತ್ರ ಒಂದೂವರೆ ವರ್ಷದ ಹಿಂದೆ ಶೂಟಿಂಗ್ ಆರಂಭವಾದ ದಿನಗಳಿಂದ ಶುಭ ಘಳಿಗೆ ನನ್ನ ಪಾಲಿಗೆ ಒದಗಿಬಂದಿದೆ. ಅಜ್ಜನ ದಯೆಯಿಂದಾಗಿ ಕಾಂತಾರ-2 ಬ್ಯಾಂಕ್ ಗ್ರೌಂಡ್ ನಿರ್ದೇಶಕನಾಗಿ ಸೇವೆ ಸಲ್ಲಿಸುವಂತೆ ಅವಕಾಶ ಒದಗಿಬಂತು. ಖುದ್ದು ಚಿತ್ರತಂಡದ ಮುಖ್ಯಸ್ಥರೇ ಕರೆ ಮಾಡಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಈ ಸಂದರ್ಭ ಕಲ್ಜಿಗ ಚಿತ್ರದ ನಿರ್ಮಾಪಕ ಶರತ್ ಕುಮಾರ್, ನಿರ್ದೇಶಕ ಸುಮನ್ ಸುವರ್ಣ, ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳದ ನವೀನ್ ಕಾಯಂಗಳ, ಪ್ರಸಾದ್ ಕಾಯಂಗಳ, ವನಿತಾ ಗಿರೀಶ್, ಪುರುಷೋತ್ತಮ್ ಕಲ್ಲಾಪು ಉಪಸ್ಥಿತರಿದ್ದರು.