ಬೆಂಗಳೂರು, ಆಗಸ್ಟ್ 17, (DaijiworldNews/TA) : ಕೊಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ನಡೆದಂತಹ ವೈದ್ಯೆಯ ಅತ್ಯಾಚಾರ ಕೊಲೆ ವಿಚಾರಕ್ಕೆ ದೇಶವೇ ಆಕ್ರೋಶಗೊಂಡಿದೆ. ಇದೀಗ ಇದೇ ವಿಚಾರವಾಗಿ ನಟ, ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದು, ನಟ ಕಾನೂನು ಬದಲಾವಣೆಗೆ ಆಗ್ರಹಿಸಿದ್ದಾರೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿರುವ ಅವರ ಮಾತುಗಳು ಸದ್ಯ ಚರ್ಚೆಗೆ ಗ್ರಾಸವಾಗಿವೆ.
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದೊಂದು ನೋಟ್ ಬರೆದು ಶೈನ್ ಶೆಟ್ಟಿ ಬದಲಾಗಲೇಬೇಕು ಕಾನೂನು ಎಂದು ಕೇಳಿಕೊಂಡಿದ್ದಾರೆ. ಶಾಸನಾತ್ಮಕ ತಿದ್ದುಪಡಿಯ ಮೂಲಕ ಮತ್ತು ಸಾಂವಿಧಾನಿಕ ಸವಾಲಿನ ಮೂಲಕ ಎರಡು ರೀತಿಯಲ್ಲಿ ಭಾರತದಲ್ಲಿನ ಕಾನೂನುಗಳನ್ನು ಬದಲಾಯಿಸಬಹುದು.' ಮತ್ತು ಭಾರತದ ಸಂಸತ್ತು ಮತ್ತು ಅಲ್ಲಿ ಕುಳಿತಿರುವ ಪ್ರತಿಯೊಬ್ಬರೂ ಅದನ್ನ ಬದಲಾಯಿಸಬೇಕು, ಇದೀಗ ಬದಲಾಯಿಸುವ ಸಮಯ ಬಂದಿದೆ ಎಂದು ಬಹಳಷ್ಟು ವಿಚಾರಗಳನ್ನು ಬರೆದುಕೊಂಡಿದ್ದಾರೆ.
ಶೈನ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂ ಕೆಲವೊಂದು ವಿಚಾರಗಳನ್ನು ಬರೆದುಕೊಂಡು ಸುದ್ದಿಯಲ್ಲಿದ್ದಾರೆ. ನಾನು ಭಾರತ ಮಾತೆ ಎನ್ನುವ ದೇಶಕ್ಕೆ ಸೇರಿದವನಾಗಿದ್ದೇನೆ, ನಾನು ಹಲವಾರು ದೇವತೆಗಳನ್ನ ಮತ್ತು ಹಬ್ಬಗಳನ್ನ ಆಚರಿಸುವ, ಈ ಹಬ್ಬಗಳಲ್ಲಿ ಲಕ್ಷ್ಮೀ, ಸರಸ್ವತಿ ಎಂದು ಮಹಿಳೆಯರಿಗೆ ಗೌರವ ಕೊಡುವ, ಮಹಿಳೆಯರನ್ನು ಪೂಜಿಸುವ, ಮಹಿಳೆಯರನ್ನು ಸೆಲೆಬ್ರೇಟ್ ಮಾಡುವ ದೇಶಕ್ಕೆ ಸೇರಿದವನಾಗಿದ್ದೇನೆ, ನಿಜವಾಗಿಯೂ ಸ್ವತಂತ್ರ್ಯ ಭಾರತ ಎನ್ನುವ ಹೆಮ್ಮೆ ನಮ್ಮಲ್ಲಿ ಇದೆಯೇ? ಲಕ್ಷ್ಮೀ, ಸರಸ್ವತಿ ಎಂದು ಗೌರವಿಸುವ ಮಹಿಳೆಯರನ್ನೇ ಅತ್ಯಾಚಾರ ಮಾಡಿ, ಕೊಲೆ ಮಾಡುತ್ತಿರುವಾಗ ನಾನು ಮನೆಯಲ್ಲಿ ಲಕ್ಷ್ಮೀ ಪೂಜೆ ಮಾಡಬೇಕೆ? ಎಂಬುವುದಾಗಿ ಪ್ರಶ್ನಿಸಿದ್ದಾರೆ ಶೈನ್ ಶೆಟ್ಟಿ.
ನನ್ನ ದೇಶದ ನಾಯಕರೇ? ದೇಶದ ಅಧಿಕಾರಿಗಳೇ? ದೇಶದ ನ್ಯಾಯಂಗ ವ್ಯವಸ್ಥೇಯೇ…? ಇನ್ನೆಷ್ಟು ಜನ? ಇನ್ನೆಷ್ಟು ಸಮಯ? 3 ವರ್ಷದಿಂದ ಹಿಡಿದು, 31 ವರ್ಷದಿಂದ ಹಿಡಿದು, 75ವಯಸ್ಸಿನ ಮಹಿಳೆಯವರೆಗೂ, ಏಳು ವರ್ಷದ ಮಗುವಿನ ಅಮ್ಮನಿಂದ ಹಿಡಿದು, ಸ್ಪಾನಿಶ್ ಬೈಕರ್ ವರೆಗೆ, ಮಗುವಿನಿಂದ ಹಿಡಿದು, ವೈದ್ಯರವರೆಗೆ ಇನ್ನೆಷ್ಟು ಜನ? ಒಬ್ಬರ ತಾಯಿ, ಇನ್ನೊಬ್ಬರ ಅಮ್ಮ, ಮತ್ತೊಬ್ಬರ ಹೆಂಡತಿ, ಮಗದೊಬ್ಬರ ಗರ್ಲ್ ಫ್ರೆಂಡ್ ಇನ್ನೆಷ್ಟು ಜನ? ಎಂಬುವುದಾಗಿ ಪ್ರಶ್ನಿಸಿದ್ದಾರೆ.
ನೀವು ಯಾವುದಕ್ಕೆ ಕಾಯುತ್ತಿದ್ದೀರಿ ನಾಯಕರೇ? ನಿಮ್ಮ ಕುಟುಂಬದ ಯಾರಾದರೊಬ್ಬ ಮಹಿಳಾ ಸದಸ್ಯರಿಗೆ ಈ ರೀತಿ ಆಗೋದಿಕ್ಕೆ ಕಾಯ್ತಿದ್ದೀರಾ? ಅಥವಾ ಶ್ರೀಮಂತ ಗೌರವಾನ್ವಿತ ಕುಟುಂಬದ ಮನೆ ಮಗಳ ಜೊತೆ ಈ ರೀತಿ ಆಗೋದಕ್ಕೆ ಕಾಯ್ತಿದ್ದೀರಾ? ಇಲ್ಲಿವರೆಗೆ ಅದೆಷ್ಟೋ ಕಾನೂನುಗಳು ಬದಲಾಗಿದೆ. ಒಳ್ಳೆಯದಕ್ಕಾಗಿ ಕಾನೂನು ಬದಲಾವಣೆ ಆಗಲಿ. ಮಾನವೀಯತೆ ಮನುಷ್ಯರಿಗಾಗಿ, ರಾಕ್ಷಸರಿಗಾಗಿ ಅಲ್ಲ, ಅತ್ಯಾಚಾರಿಗಳನ್ನ ಕೊಂದು ಬಿಡಿ, ಕಾನೂನು ಬದಲಾವಣೆ ಮಾಡಿ ಎಂದು ನಟ ಶೈನ್ ಶೆಟ್ಟಿ ಆಗ್ರಹಿಸಿದ್ದಾರೆ.